ಮುಂಬೈ: ವಂಚಿತ್ ಬಹುಜನ್ ಅಘಾಡಿ (ವಿಬಿಎ) ಪಕ್ಷದ ಸಂಸ್ಥಾಪಕ ಪ್ರಕಾಶ್ ಅಂಬೇಡ್ಕರ್ (70) ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಅವರನ್ನು ಪುಣೆಯ ಆಸ್ಪತ್ರೆಗೆ ಗುರುವಾರ ಮುಂಜಾನೆ ದಾಖಲಿಸಲಾಗಿದೆ.
ಪ್ರಕಾಶ್ ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ ಡಾ. ಬಿ.ಆರ್.
ಅಂಬೇಡ್ಕರ್ ಅವರ ಮೊಮ್ಮಗ.
ವೃತ್ತಿಯಿಂದ ವಕೀಲ, ಸಾಮಾಜಿಕ ಹೋರಾಟಗಾರ ಮತ್ತು ರಾಜಕಾರಣಿಯೂ ಆಗಿರುವ ಅವರು ‘ಬಾಳಾ ಸಾಹೇಬ್ ಅಂಬೇಡ್ಕರ್’ ಎಂದು ಜನಪ್ರಿಯ. ಅವರು, ಅಕೋಲ ಕ್ಷೇತ್ರದಿಂದ ಎರಡು ಬಾರಿ ಸಂಸದ ಮತ್ತು ಒಮ್ಮೆ ರಾಜ್ಯ ಸಭೆ ಸದಸ್ಯರಾಗಿದ್ದರು.
ಪ್ರಕಾಶ್ ಅಂಬೇಡ್ಕರ್ ಅವರ ಹೃದಯದಲ್ಲಿ ರಕ್ತ ಹೆಪ್ಪುಗಟ್ಟಿದ್ದು, ಸದ್ಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ‘ಅವರ ಆರೋಗ್ಯ ಸ್ಥಿರವಾಗಿದೆ. ಆಂಜಿಯೋಗ್ರಫಿಗೆ ಒಳಗಾಗಲಿದ್ದಾರೆ’ ಎಂದು ‘ವಿಬಿಎ’ ಹೇಳಿಕೆ ಬಿಡುಗಡೆ ಮಾಡಿದೆ.
ಪ್ರಕಾಶ್ ಅಂಬೇಡ್ಕರ್ ಅವರ ಕುಟುಂಬವು ಸದ್ಯ ಪ್ರತಿಕ್ರಿಯೆ ನೀಡುವ ಸ್ಥಿತಿಯಲ್ಲಿ ಇಲ್ಲ ಎಂದಿರುವ ಪಕ್ಷ, ಕುಟುಂಬದ ಖಾಸಗಿತನವನ್ನು ಗೌರವಿಸುವಂತೆಯೂ ಮನವಿ ಮಾಡಿದೆ.
ಪ್ರಕಾಶ್ ಅನುಪಸ್ಥಿತಿಯಲ್ಲಿ ಪ್ರಚಾರ
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20ರಂದು ಮತದಾನ ನಡೆಯಲಿದೆ.
ಅನಾರೋಗ್ಯದ ಕಾರಣದಿಂದಾಗಿ, ಬಾಳಾ ಸಾಹೇಬ್ ಅವರ ಆರೋಗ್ಯದ ಮೇಲೆ ಮುಂದಿನ 3-5 ದಿನಗಳ ವರೆಗೆ ನಿಗಾ ಇರಿಸಲಾಗುತ್ತದೆ. ಚುನಾವಣಾ ಸಮಿತಿ, ಪ್ರಣಾಳಿಕೆ ಸಮಿತಿ ಮತ್ತು ಮಾಧ್ಯಮ ವಿಭಾಗದ ಸಹಕಾರದೊಂದಿಗೆ ವಿಬಿಎ ಪ್ರಚಾರ ಆರಂಭಿಸಲಿದೆ ಎಂದು ಎಂದು ವಿಬಿಎ ರಾಜ್ಯ ಘಟಕದ ಅಧ್ಯಕ್ಷೆ ರೇಖಾ ರೈ ಠಾಕೂರ್ ತಿಳಿಸಿದ್ದಾರೆ.
ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳ ಸಲುವಾಗಿ ಪ್ರಕಾಶ್ ಅಂಬೇಡ್ಕರ್ ಅವರು ಈ ವರ್ಷ ಮಾರ್ಚ್‌ನಿಂದಲೂ ನಿರಂತರವಾಗಿ ಪ್ರಯಾಣ ಮಾಡಿದ್ದರು.
Laxmi News 24×7