ಹುಬ್ಬಳ್ಳಿ, ಸೆಪ್ಟಂಬರ್ 27: ಬೆಂಗಳೂರಿನಿಂದ ತೆರಳುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು (Vande Bharat Express Rail) ಬೆಳಗಾವಿವರೆಗೆ ವಿಸ್ತರಣೆ ಮಾಡಬೇಕು ಎಂಬ ಕೂಗಿನ ಜೊತೆಗೆ ಇದೀಗ ಈ ಜಿಲ್ಲೆಯಲ್ಲಿ ನಿಲುಗಡೆ ನೀಡುವಂತೆ ಒತ್ತಾಯ ಕೇಳಿ ಬಂದಿದೆ. ಈ ಕುರಿತು ಖುದ್ದು ಕ್ರಮ ವಹಿಸುವಂತೆ ಮಾಜಿ ಸಿಎಂ ಹಾಗೂ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ಹಾವೇರಿ-ಗದಗ ಜಿಲ್ಲೆಗಳ ವ್ಯಾಪ್ತಿಯ ನಡೆಯುತ್ತಿರುವ ವಿವಿಧ ರೈಲ್ವೇ ಕಾಮಗಾರಿಗಳ ಕುರಿತು ಶುಕ್ರವಾರ ಹುಬ್ಬಳ್ಳಿಯ ಗದಗ ರಸ್ತೆಯಲ್ಲಿರುವ ರೈಲ್ ಸೌಧದಲ್ಲಿ ಬಸವರಾಜ ಬೊಮ್ಮಾಯಿ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಹಾವೇರಿ ರೈಲು ನಿಲ್ದಾಣದಲ್ಲಿ ಬೆಂಗಳೂರು ಮತ್ತು ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಕೆಲವು ದಿನಗಳಿಂದ ಬೆಂಗಳೂರಿನಿಂದ ಹೊರಟು ಹಾವೇರಿಗೆ ನಿಲುಗಡೆ ನೀಡದೇ ಧಾರವಾಡಕ್ಕೆ ಕೊನೆಯಾಗುತ್ತಿದ್ದ ವಂದೇ ಭಾರತ್ ರೈಲು ಸೇವೆಯನ್ನು ಬೆಳಗಾವಿವರೆಗೆ ವಿಸ್ತರಣೆ ಮಾಡುವಂತೆ ಆಗ್ರಹ ಕೇಳಿ ಬಂದಿದೆ. ಇದಕ್ಕೆ ಮಾಜಿ ಸಿಎಂ ಹಾಗೂ ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಕೇಂದ್ರ ಹಾಗೂ ರಾಜ್ಯ ರೈಲ್ವೆ ಖಾತೆ ಸಚಿವರಿಗೆ ಖುದ್ದು ಮನವಿ ನೀಡಿದ್ದಾರೆ.