ಬೆಳಗಾವಿ: ಜಿಲ್ಲೆಗೆ ಮಂಜೂರಾದ ಒಟ್ಟು ಏಳು ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಇನ್ನೂ ಎರಡು ಆಸ್ಪತ್ರೆಗಳು ಕಾರ್ಯಾರಂಭ ಮಾಡಿಲ್ಲ. ಚಿಕ್ಕೋಡಿ ಹಾಗೂ ಖಾನಾಪುರದದಲ್ಲಿ ಮೂಲಸೌಕರ್ಯಗಳು ಸಿದ್ಧಗೊಂಡರೂ ಸಿಬ್ಬಂದಿ ನೇಮಕ ಹಾಗೂ ಸಣ್ಣಪುಟ್ಟ ಕೆಲಸಗಳಿಂದಾಗಿ ಇನ್ನೂ ಜನರ ಉಪಯೋಗಕ್ಕೆ ಬಂದಿಲ್ಲ.
ಉಳಿದಂತೆ, ಗೋಕಾಕದಲ್ಲಿ 100 ಬೆಡ್, ಒಂಟಮೂರಿಯಲ್ಲಿ 30 ಬೆಡ್, ನಿಪ್ಪಾಣಿ 30 ಬೆಡ್, ಸವದತ್ತಿ 60 ಬೆಡ್, ಬೈಲಹೊಂಗಲ 100 ಬೆಡ್‌ನ ಆಸ್ಪತ್ರೆಗಳು ಕೆಲಸ ಆರಂಭಿಸಿವೆ.
ಚಿಕ್ಕೋಡಿಯಲ್ಲಿ 100 ಹಾಸಿಗೆ ಹಾಗೂ ಖಾನಾಪುರದ 60 ಹಾಸಿಗೆಗಳ ಆಸ್ಪತ್ರೆಗಳು ಅನಾಥ ಸ್ಥಿತಿಯಲ್ಲಿವೆ. ಕಳೆದ ತಿಂಗಳು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ-2 ಪ್ರಕಾಶ ಹುಕ್ಕೇರಿ ಅವರೇ ಧ್ವನಿ ಎತ್ತಿದ್ದರು. ‘ಕಷ್ಟಪಟ್ಟು ಅನುದಾನ ತಂದು ಆಸ್ಪತ್ರೆ ಕಟ್ಟಿದ್ದೇವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರಿಗೆ ತಲುಪದಾಗಿದೆ’ ಎಂದು ಕಿಡಿ ಕಾರಿದ್ದರು.
‘ಕೇವಲ 15 ದಿನಗಳಲ್ಲಿ ಈ ಎರಡೂ ಆಸ್ಪತ್ರೆಗಳು ಕಾರ್ಯಾರಂಭ ಮಾಡಬೇಕು, ಇಲ್ಲದಿದ್ದರೆ ಕಠಿಣ ಕ್ರಮ ವಹಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದರು. ಇದಾಗಿ ತಿಂಗಳಾದರೂ ಆಸ್ಪತ್ರೆಗಳು ಮಾತ್ರ ತೆರೆದುಕೊಂಡಿಲ್ಲ.
ಬಾರದ ಉದ್ಘಾಟನೆ ಭಾಗ್ಯ:
ಚಿಕ್ಕೋಡಿ: ರಾಷ್ಟ್ರೀಯ ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅನುದಾನದಲ್ಲಿ ಪಟ್ಟಣದ ಹೊರ ವಲಯದಲ್ಲಿ 5 ಎಕರೆ ಪ್ರದೇಶದಲ್ಲಿ ₹20 ಕೋಟಿ ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಗೊಂಡಿದೆ. 2015ರಲ್ಲಿ ಆರಂಭವಾದ 100 ಹಾಸಿಗೆಯ ಆಸ್ಪತ್ರೆಯ ಕಟ್ಟಡ ನಿರ್ಮಾಣ ಕಾಮಗಾರಿಯು ಬಹುತೇಕ ಮುಕ್ತಾಯಗೊಂಡಿದ್ದರೂ ಉದ್ಘಾಟನೆಯ ಭಾಗ್ಯ ಕಾಣದೇ ಇರುವುದು ಸ್ಥಳೀಯರಲ್ಲಿ ಬೇಸರ ಮೂಡಿಸಿದೆ.
ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಸ್ತ್ರೀ ರೋಗ ತಜ್ಞ-1, ಅರಿವಳಿಕೆ ತಜ್ಞರು-2, ಮಕ್ಕಳ ತಜ್ಞ-1, ರೇಡಿಯಾಲಾಜಿಸ್ಟ್-1, ಹಿರಿಯ ಶುಶ್ರೂಷಕ -1, ಶುಶ್ರೂಷಕ-20, ಕಿರಿಯ ಫಾರ್ಮಾಸಿಸ್ಟ್-1, ದ್ವಿತೀಯ ದರ್ಜೆ ಸಹಾಯಕ-1, ಡಾಟಾ ಎಂಟ್ರಿ ಆಪರೇಟರ್ 2, ಡಿ ಗ್ರೂಫ್ ನೌಕರರು 6 ಸೇರಿದಂತೆ ಒಟ್ಟು 36 ಹುದ್ದೆಗಳನ್ನು ಸರ್ಕಾರ ಮಂಜೂರು ಮಾಡಿದೆ. ಸುಸಜ್ಜಿತ ಕಟ್ಟಡ, ಆವರಣಗೋಡೆ, ಶವಾಗಾರ, ವೈದ್ಯರ ಹಾಗೂ ಸಿಬ್ಬಂದಿಯ ವಸತಿ ಗೃಹ ನಿರ್ಮಾಣ ಕಾಮಗಾರಿಯು ಪೂರ್ಣಗೊಂಡಿದೆ.
ಶಸ್ತ್ರ ಚಿಕಿತ್ಸೆ ಕೊಠಡಿ, ವಾರ್ಡ್‍ಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ವೈದ್ಯಕೀಯ ಉಪಕರಣಗಳೂ ಬಂದಿವೆ. 2 ಲಿಫ್ಟ್‌ಗಳ ಪೈಕಿ ಈಗಾಗಲೇ 1 ಲಿಫ್ಟ್ ಕಾರ್ಯ ಪೂರ್ಣಗೊಂಡಿದೆ. 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಾಗಿದ್ದರಿಂದ ಇದೀಗ ಕೇವಲ ಒಂದು ಕೊಳವೆಬಾವಿ ಮಾತ್ರ ಇದೆ. ಇನ್ನೂ ಒಂದೆರಡು ಕೊಳವೆಬಾವಿ ಕೊರೆಯಿಸಿ ನೀರಿನ ಸೌಕರ್ಯ ಕಲ್ಪಿಸಬೇಕಿದೆ. ಆಸ್ಪತ್ರೆಗೆ ಆಂಬುಲೆನ್ಸ್ ಸೇರಿದಂತೆ ವಾಹನಗಳು ಸರಾಗವಾಗಿ ಆಗಮಿಸಲು ಉತ್ತಮ ರಸ್ತೆ ನಿರ್ಮಾಣ ಮಾಡಬೇಕಿದೆ.
ಚಿಕ್ಕೋಡಿ ತಾಲ್ಲೂಕು ವ್ಯಾಪ್ತಿಯಲ್ಲಿ ಪ್ರತಿ ತಿಂಗಳು 600ರಿಂದ 800 ಕ್ಕೂ ಹೆಚ್ಚು ಹೆರಿಗೆಗಳು ಆಗುತ್ತಿವೆ. ಈ ಕಾರಣಕ್ಕಾಗಿಯೇ ಪ್ರಕಾಶ ಹುಕ್ಕೇರಿ ಅವರ ಪ್ರಯತ್ನದಿಂದ ಕಟ್ಟಡ ತಲೆ ಎತ್ತಿದೆ.
2023ರ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಆಸ್ಪತ್ರೆಯ ಲೋಕಾರ್ಪಣೆಗೊಳ್ಳುತ್ತದೆ ಎಂಬ ನಿರೀಕ್ಷೆ ಹುಸಿಯಾಯಿತು. ಸ್ವಾತಂತ್ರ್ಯೋತ್ಸವ ದಿನ (ಆ.15) ಉದ್ಘಾಟಿಸುವ ಭರವಸೆ ನೀಡಲಾಗಿತ್ತು. ಈಗ ಅದೂ ಕೂಡ ಹುಸಿಯಾಗಿದೆ.