ಉಡುಪಿ: ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಕೃಷಿ ಸಿಂಚಯ ಯೋಜನೆ- ಮುಖ್ಯಮಂತ್ರಿಗಳ ಸೂಕ್ಷ್ಮ ನೀರಾವರಿ ಕಾರ್ಯಕ್ರಮದಡಿ ಹೆಚ್ಚುವರಿ ಸಬ್ಸಿಡಿ ಕಡಿತವಿಲ್ಲದೇ ಪೂರ್ಣ ಲಾಭ ರೈತರಿಗೆ ಸಿಗಲಿದೆ ಎಂದು ಉಡುಪಿ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿ ಪ್ರಕಟನೆ ತಿಳಿಸಿದೆ.
ಜು. 8 ರಂದು ಪ್ರಕಟಗೊಂಡಿರುವ “ಕೇಂದ್ರ ಸರಕಾರದ ಕೃಷಿ ಸಿಂಚಯ ಯೋಜನೆ ರಾಜ್ಯದ ಹೆಚ್ಚುವರಿ ಸಬ್ಸಿಡಿ ಖೋತಾ: ರೈತರ ಹೆಗಲಿಗೆ ಹೆಚ್ಚುವರಿ ಹೊರೆ’ ಎಂಬ ವರದಿಗೆ ಸಂಬಂಧಿಸಿ, 2 ಹೆಕ್ಟೇರ್ ವರೆಗೆ ತುಂತುರು ನೀರಾವರಿ ಘಟಕಗಳ ವಿತರಣೆಗೆ ಸಣ್ಣ/ಅತಿಸಣ್ಣ ರೈತರಿಗೆ ಕೇಂದ್ರದ ಪಾಲು ಶೇ.33 ಹಾಗೂ ಹೆಚ್ಚುವರಿ ಸಹಿತ ರಾಜ್ಯದ ಪಾಲು ಶೇ.57 ಸೇರಿದಂತೆ ಶೇ.90ರಷ್ಟು ಸಹಾಯಧನ ಒದಗಿಸಲಾಗುತ್ತದೆ. ಇತರ ವರ್ಷದ ರೈತರಿಗೆ ಕೇಂದ್ರದ ಪಾಲು ಶೇ.27 ಹಾಗೂ ರಾಜ್ಯದ ಪಾಲು ಶೇ.63ರಷ್ಟು ಸಹಾಯಧನ ಒದಗಿಸಲಾಗುತ್ತದೆ.
ಸಬ್ಸಿಡಿಯಲ್ಲಿ ಯಾವುದೇ ಖೋತಾ ಆಗುವುದಿಲ್ಲ ಎಂಬ ಸ್ಪಷ್ಟನೆ ನೀಡಿದೆ.
ಪ್ರಸಕ್ತ ಸಾಲಿನಲ್ಲಿ ತುಂತುರು ಘಟಕಗಳ ವಿತರಣೆಗೆ ಈಗಾಗಲೇ ಇಲಾಖೆಗೆ ಕಾರ್ಯಕ್ರಮ ಬಂದಿದ್ದು, ರೈತರಿಂದ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಶೀಘ್ರದಲ್ಲಿ ರೈತರಿಗೆ ಕಾರ್ಯಾದೇಶವನ್ನು ನೀಡಿ ಶೇ.90ರಷ್ಟು ಸಹಾಯಧನದಲ್ಲಿ 2 ಹೆಕ್ಟೇರ್ ವರೆಗಿನ ಎಲ್ಲ ರೈತರಿಗೆ ತುಂತುರು ನೀರಾವರಿ ಘಟಕಗಳನ್ನು ಒದಗಿಸಲಾಗುತ್ತದೆ.