ಅಮರಾವತಿ: ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬದಲು ಮತಪತ್ರಗಳ ಬಳಕೆ ಆರಂಭಿಸಬೇಕು ಎಂದು ವೈಎಸ್‌ಆರ್‌ಸಿಪಿ ನಾಯಕ ವೈ.ಎಸ್. ಜಗನ್ ಮೋಹನ್ ರೆಡ್ಡಿ ಒತ್ತಾಯಿಸಿದ್ದಾರೆ.
ಈಚೆಗೆ ನಡೆದ ಲೋಕಸಭಾ ಚುನಾವಣೆ ಹಾಗೂ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ ಹೀನಾಯ ಸೋಲು ಕಂಡಿದೆ.
ಮುಂದುವರಿದ ಪ್ರಜಾತಂತ್ರ ರಾಷ್ಟ್ರಗಳು ಮತಪತ್ರಗಳನ್ನು ಬಳಕೆ ಮಾಡುತ್ತಿವೆ ಎಂದು ರೆಡ್ಡಿ ಅವರು ‘ಎಕ್ಸ್’ನಲ್ಲಿ ಬರೆದಿದ್ದಾರೆ.
‘ಭಾರತದ ಪ್ರಜಾತಂತ್ರ ವ್ಯವಸ್ಥೆಯ ನಿಜವಾದ ಆಶಯವನ್ನು ಎತ್ತಿಹಿಡಿಯಲು ನಾವು ಕೂಡ ಮತಪತ್ರಗಳ ಕಡೆ ಮುಖಮಾಡಬೇಕು’ ಎಂದಿದ್ದಾರೆ.
‘ನ್ಯಾಯದಾನ ಆಗುವುದಷ್ಟೇ ಅಲ್ಲದೆ, ಅದು ಆಗಿದೆ ಎಂಬುದು ಗೊತ್ತಾಗುವಂತೆಯೂ ಇರಬೇಕು ಎಂಬ ಮಾತಿನಂತೆ, ಪ್ರಜಾತಂತ್ರವು ಮೇಲುಗೈ ಸಾಧಿಸಿದರಷ್ಟೇ ಸಾಕಾಗುವುದಿಲ್ಲ, ಅದು ಅನುಮಾನಕ್ಕೆ ಆಸ್ಪದವಿಲ್ಲದಂತೆ ಮೇಲುಗೈ ಸಾಧಿಸಿದೆ ಎಂಬುದು ಗೊತ್ತಾಗುವಂತೆಯೂ ಇರಬೇಕು’ ಎಂದು ಅವರು ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ ಪಕ್ಷವು ಕೇವಲ 11 ಸ್ಥಾನಗಳನ್ನು ಗೆದ್ದಿದೆ. ಲೋಕಸಭಾ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳನ್ನು ಪಡೆದಿದೆ.