ಎಸ್‌ಎಸ್‌ಎಲ್‌ಸಿ ಪರೀಕ್ಷೆ-2: ಪರೀಕ್ಷೆ ನೋಂದಣಿಗೆ ಮಕ್ಕಳ ನಿರಾಸಕ್ತಿ
ಬೆಳಗಾವಿ: ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಾರ್ಷಿಕ-1ನೇ ಪರೀಕ್ಷೆ ಪೂರ್ಣಗೊಳಿಸದ 23,801 ವಿದ್ಯಾರ್ಥಿಗಳ ಪೈಕಿ 23,061 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ವಾರ್ಷಿಕ-2 ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. 760 ವಿದ್ಯಾರ್ಥಿಗಳು ಎರಡನೇ ಪ್ರಯತ್ನದಿಂದ ದೂರ ಸರಿದಿದ್ದಾರೆ.
2023-24ನೇ ಸಾಲಿನ ಪರೀಕ್ಷೆಯಲ್ಲಿ ಶೇ 64.93 ಫಲಿತಾಂಶ ದಾಖಲಿಸಿದ್ದ ಬೆಳಗಾವಿ ಶೈಕ್ಷಣಿಕ ಜಿಲ್ಲೆ 29ನೇ ಸ್ಥಾನ ಗಳಿಸಿತ್ತು. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಶೇ 69.82 ಫಲಿತಾಂಶದೊಂದಿಗೆ 25ನೇ ಸ್ಥಾನ ಗಳಿಸಿತ್ತು. ಬೆಳಗಾವಿಯಲ್ಲಿ 10,798, ಚಿಕ್ಕೋಡಿಯಲ್ಲಿ 13,003 ಸೇರಿದಂತೆ 23,801 ವಿದ್ಯಾರ್ಥಿಗಳು ಪರೀಕ್ಷೆ ಪೂರ್ಣಗೊಳಿಸಿರಲಿಲ್ಲ.
ಆದರೆ, ಪರೀಕ್ಷೆಯಲ್ಲಿ ತೇರ್ಗಡೆಯಾಗದವರನ್ನು ಶಾಲಾ ಶಿಕ್ಷಣ ಇಲಾಖೆ ಕಡೆಗಣಿಸಿರಲಿಲ್ಲ. ಅವರಿಗಾಗಿ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ವಿಶೇಷ ತರಗತಿ ಸಂಘಟಿಸಿತ್ತು. ‘ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪೂರ್ಣಗೊಳಿಸಲು ಈಗ ಮೂರು ಅವಕಾಶಗಳಿವೆ. ಮೊದಲ ಬಾರಿ ತೇರ್ಗಡೆಯಾಗದವರು ಮೂರು ಬಾರಿ ಪರೀಕ್ಷೆ ಬರೆಯಬಹುದು. ಈ ಅವಕಾಶ ಬಳಸಿಕೊಳ್ಳಿ’ ಎಂದು ಜಾಗೃತಿ ಮೂಡಿಸಿತ್ತು. ಫಲಿತಾಂಶ ಸುಧಾರಣೆಗೆ ನಾನಾ ಕಸರತ್ತು ನಡೆಸಿತ್ತು. ಆದರೆ, ವಿಶೇಷ ತರಗತಿಗೆ ವಿದ್ಯಾರ್ಥಿಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು.