ಬೆಳಗಾವಿ: ತಾಲ್ಲೂಕಿನ ಉಚಗಾಂವ ಗ್ರಾಮದಲ್ಲಿನ ಮಳೆಕರ್ಣಿ ದೇವಿಗೆ ಪ್ರಾಣಿ ಬಲಿ ನೀಡುವುದನ್ನು ಶುಕ್ರವಾರದಿಂದ ಸಂಪೂರ್ಣ ನಿಲ್ಲಿಸಲಾಯಿತು. ನಿಷೇಧದ ನಡುವೆಯೂ ಹಲವು ವರ್ಷಗಳಿಂದ ಪ್ರತಿ ಶುಕ್ರವಾರ ಹಾಗೂ ಮಂಗಳವಾರ ಇಲ್ಲಿ ಕುರಿ ಬಲಿ ನಡೆಯುತ್ತಲೇ ಇತ್ತು. ಗ್ರಾಮ ಪಂಚಾಯಿತಿಯಲ್ಲಿ ಈಚೆಗೆ ನಿರ್ಣಯ ಅಂಗೀಕರಿಸುವ ಮೂಲಕ ಬಲಿ ನೀಡುವುದಕ್ಕೆ ತಡೆ ಒಡ್ಡಲಾಯಿತು.
ಉಚಗಾಂವ ಗ್ರಾಮದೇವತೆ ಮಳೆಕರ್ಣಿಯ ದೇವಸ್ಥಾನ ಪುರಾತನವಾದದ್ದು. ಬಹುಪಾಲು ಮರಾಠಿಗರು ಈ ದೇವಿಗೆ ಶ್ರದ್ಧೆಯಿಂದ ನಡೆದುಕೊಳ್ಳುತ್ತಾರೆ. ಮಳೆಕರ್ಣಿದೇವಿ ಬೇಡಿದ ವರವನ್ನು ನೀಡುತ್ತಾಳೆ ಎಂಬ ನಂಬಿಕೆ ಭಕ್ತರಲ್ಲಿದೆ. ಕುರಿ- ಮೇಕೆಗಳನ್ನು ಬಲಿ ಅರ್ಪಿಸುವ ಹರಕೆ ಹೊತ್ತುಕೊಳ್ಳುವುದು ಸಂಪ್ರದಾಯ. ಪ್ರಾಣಿ ಬಲಿ ನಿಷೇಧ ಕಾಯ್ದೆ ಜಾರಿಯಾದ ಮೇಲೆ ಕದ್ದುಮುಚ್ಚಿ ಬಲಿ ನೀಡುವುದು ಮುಂದುವರಿದಿತ್ತು. ಪ್ರತಿ ಶುಕ್ರವಾರ ಹಾಗೂ ಮಂಗಳವಾರ ಐನೂರಕ್ಕೂ ಹೆಚ್ಚು ಕುರಿ- ಮೇಕೆಗಳನ್ನು ಹರಕೆ ನೀಡಲಾಗುತ್ತಿತ್ತು.
ಬಲಿಯ ಕುರಿ- ಮೇಕೆಗಳ ಮಾಂಸದಿಂದ ಸುತ್ತಲಿನ ಹೊಲಗಳಲ್ಲಿ ಮಾಂಸಾಹಾರ ತಯಾರಿಸಿ ಭಕ್ತರಿಗೆ ನೀಡಲಾಗುತ್ತಿತ್ತು. ಕುಡುಕರ ಹಾವಳಿ ಕೂಡ ಹೆಚ್ಚಾಗಿದ್ದು, ರಾತ್ರಿ ಹೊತ್ತು ಹೊಲಗಳಿಗೆ ಹೋಗಿ ಮದ್ಯ ಕುಡಿದು ಮಾಂಸದೂಟ ಮಾಡುವ ರೂಢಿ ಬೆಳೆಸಿಕೊಂಡಿದ್ದರು. ಇದರಿಂದ ಸುತ್ತಲಿನ ಹೊಲಗಳಲ್ಲಿ, ರಸ್ತೆ ಬದಿಯಲ್ಲಿ ಅಪಾರ ಪ್ರಮಾಣದ ಮಾಂಸದ ತ್ಯಾಜ್ಯ ಬೀಳುತ್ತಿತ್ತು. ದೇವಸ್ಥಾನಕ್ಕೆ ಬರುವ ಭಕ್ತರು, ವರ್ತಕರು ಹಾಗೂ ಊರಿನ ಜನರಿಗೂ ಸಮಸ್ಯೆ ಆಗುತ್ತಿತ್ತು.