ಪಣಜಿ: ಗೋವಾದ ಮಾಪ್ಸಾದ ಮುನಂಗವಾಡ-ಅಸ್ಗಾಂವ್‍ನಲ್ಲಿ ಯೋಜಿತ ನೈಟ್ ಕ್ಲಬ್ ವಿರುದ್ಧ ಗ್ರಾಮಸ್ಥರು ಒಗ್ಗೂಡಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಇಲ್ಲಿನ ನಿವಾಸಿಗಳು ನೈಟ್ ಕ್ಲಬ್ ಎದುರು ಮೇಣದ ಬತ್ತಿ ಹಿಡಿದು ಪ್ರತಿಭಟನೆ ನಡೆಸಿ ಸರಕಾರದ ಗಮನ ಸೆಳೆಯಲು ಯತ್ನಿಸಿದರು.
ಶುಕ್ರವಾರ ತಡರಾತ್ರಿ ಶ್ರೀ ಬರಸಖಲೇಶ್ವರ ದೇವಸ್ಥಾನದಲ್ಲಿ ಅಸ್ಗಾಂವ್-ಬಡೆ ನಾಗರಿಕ ಕ್ರಿಯಾ ಸಮಿತಿಯ ಧ್ವಜದ ಅಡಿಯಲ್ಲಿ ಎಲ್ಲಾ ಗ್ರಾಮಸ್ಥರು ಜಮಾಯಿಸಿದರು.
ದೇವಸ್ಥಾನದಿಂದ ಆರಂಭವಾದ ಮೇಣದ ಬತ್ತಿ ಮೆರವಣಿಗೆಯು ಯೋಜಿತ ನೈಟ್ ಕ್ಲಬ್ ಸ್ಥಳದಲ್ಲಿ ಸಮಾರೋಪಗೊಂಡಿತು. ಕೈಯಲ್ಲಿ ಮೇಣದ ಬತ್ತಿಗಳು ಮತ್ತು ಕ್ಲಬ್ ವಿರುದ್ಧ ಫಲಕಗಳನ್ನು ಹಿಡಿದು ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಅಸಗಾಂವದಲ್ಲಿ ನೈಟ್ ಕ್ಲಬ್ ಸ್ಥಾಪನೆಯಾದರೆ ಗ್ರಾಮದ ಶಾಂತಿ ಕದಡುತ್ತದೆ. ಯುವಕರು ಕೆಟ್ಟ ದಾರಿ ಹಿಡಿಯುತ್ತಾರೆ. ರಾತ್ರಿ ವೇಳೆ ವಾಹನ ದಟ್ಟಣೆ ಹೆಚ್ಚಾಗಿ ಅಪಘಾತಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ವಾಹನ ಚಲಾಯಿಸುವ ಕ್ಲಬ್ ಗ್ರಾಹಕರನ್ನು ನಿಯಂತ್ರಿಸಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು