ಬೆಂಗಳೂರು, ಮೇ 19: ಕರ್ನಾಟಕದ ವಿವಿಧ ಜಿಲ್ಲೆಯಲ್ಲಿ ಪೂರ್ವ ಮುಂಗಾರು, ಚಂಡಮಾರುತದ ಪ್ರಭಾವದಿಂದ ಮಳೆಯಾಗುತ್ತಿದೆ. ನೈಋತ್ಯ ಮುಂಗಾರು ಹಂಗಾಮು 2024 ಸಹ ಆರಂಭವಾಗಲು ಕೆಲವೇ ದಿನ ಉಳಿದಿದ್ದು, ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದಾರೆ.
ಕಳೆದ ವರ್ಷದ ಮಳೆ ಕೊರತೆ, ಬೆಳೆ ನಷ್ಟ, ಬೇಸಿಗೆಯಿಂದ ಕಂಗಾಲಾಗಿದ್ದ ರೈತರಿಗೆ ಪೂರ್ವ ಮುಂಗಾರು ಮಳೆ ಕೊಂಚ ನೆಮ್ಮದಿ ತಂದಿದೆ.
ನೈಋತ್ಯ ಮುಂಗಾರು ಮಳೆ ಸಹ ಉತ್ತಮವಾಗಿ ಸುರಿಯಲಿದೆ ಎಂಬ ನಿರೀಕ್ಷೆಯಲ್ಲಿ ರೈತರು ಕೃಷಿ ಚಟುವಟಿಕೆಗೆ ಚಾಲನೆ ನೀಡಿದ್ದಾರೆ.ಮುಂಗಾರು ಹಂಗಾಮು ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಕೃಷಿ ಇಲಾಖೆ ರೈತರಿಗೆ ಹಲವಾರು ಸಲಹೆಗಳನ್ನು ನೀಡಿದೆ. ಅವುಗಳಲ್ಲಿ ಪ್ರಮುಖವಾಗಿ ಬಿತ್ತನೆ ಬೀಜ ಖರೀದಿ ಕುರಿತು ಮಾಹಿತಿ ನೀಡಲಾಗಿದೆ. ರೈತರು ಬೀಜ ಖರೀದಿ ಮಾಡುವಾಗ ಎಚ್ಚರ ವಹಿಸಬೇಕು ಎಂದು ಕರೆ ನೀಡಲಾಗಿದೆ.