ಸಂಕೇಶ್ವರ: ಯಾವುದೇ ಬೆಳೆ ಬೆಳೆಯಲು ಅವುಗಳ ಬಿತ್ತನೆಯಲ್ಲಿ ಸೂಕ್ತ ಅಂತರ ಅಗತ್ಯ. ಇದರಿಂದ ಬೆಳೆಗಳು ಉತ್ತಮವಾಗಿ ಬೆಳೆದು ಉತ್ತಮ ಫಸಲು ಬರಲು ಸಾಧ್ಯ ಎಂಬ ಅಂಶವನ್ನು ಸಂಕೇಶ್ವರದ ರೈತ ಮಲ್ಲಿಕಾರ್ಜುನ ಕಲ್ಲಪ್ಪಾ ಬಸ್ತವಾಡಿ ಅವರು ತಮ್ಮ ಹೊಲದಲ್ಲಿ ಹೈಬ್ರಿಡ್ ಜೋಳದ ಕುಣಿಗಾಳು ಬಿತ್ತನೆ ಪ್ರಾಯೋಗಿಕವಾಗಿ ಮಾಡಿ ಯಶಸ್ವಿಯಾಗಿದ್ದಾರೆ.ಇದರಿಂದ ಅವರಿಗೆ ಭರ್ಜರಿ ಫಸಲು ಬಂದಿದೆ.
ಹೊಲದಲ್ಲಿ ಏನಾದರೊಂದು ಹೊಸ ಪ್ರಯೋಗ ಮಾಡುತ್ತಲೆ ಬಂದಿರುವ ಮಲ್ಲಿಕಾರ್ಜುನ ಬಸ್ತವಾಡಿ, ಈ ವರ್ಷ ಹಿಂಗಾರಿನಲ್ಲಿ ಒಂದು ಎಕರೆ ಹೊಲದಲ್ಲಿ ಹೈಬ್ರಿಡ್ ಜೋಳ ಬಿತ್ತನೆ ಮಾಡಲು ಯೋಚಿಸಿದರು.
ಬಿತ್ತನೆ ಪೂರ್ವದಲ್ಲಿ ಭೂಮಿಗೆ 6 ಚಕ್ಕಡಿ ಗಾಡಿ ಕೊಟ್ಟಿಗೆ ಗೊಬ್ಬರ ಹರಡಿದರು. ಹೈಬ್ರಿಡ್ ಜೋಳದ ಬೀಜಗಳನ್ನು ಕಾಳಿನಿಂದ ಕಾಳಿಗೆ 4 ಇಂಚು ದೂರ ಹಾಗೂ ಸಾಲಿನಿಂದ ಸಾಲಿಗೆ 40 ಇಂಚು ಅಂತರದಲ್ಲಿ ಕೈಯಂತ್ರದಿಂದ ಬಿತ್ತನೆ ಮಾಡಿದರು. ಅನಂತರ ಬೆಳೆಗಳು ಉತ್ತಮ ಅಂತರದಿಂದ ಬೆಳೆಯಲಾರಂಭಿಸಿದಾಗ ಬೆಳೆಗಳಿಗೆ ಜೀವಾಮೃತ, ದೇಶಿ ದಾರು ಹಾಗೂ ಗೋಮೂತ್ರಗಳನ್ನು ಸಿಂಪಡಿಸಿದರು. ಇದರಿಂದ ಜೋಳದ ಬೆಳೆಯು ಉತ್ತಮವಾಗಿ ಬೆಳೆಯಿತು.
ಒಟ್ಟು 100 ದಿನದಲ್ಲಿ ಹೈಬ್ರಿಡ್ ಜೋಳವು ಭರ್ಜರಿಯಾಗಿ ಬೆಳೆದು ನಿಂತಿತು. ಜೋಳ ಕಟಾವು ಮಾಡಿ, ರಾಶಿ ಮಾಡಿದಾಗ ಒಂದು ಎಕರೆಗೆ 27 ಕ್ವಿಂಟಲ್ ಇಳುವರಿ ನೀಡಿತು. ಅದನ್ನು ತಕ್ಷಣವೇ ಪೇಟೆಗೆ ಮಾರಾಟ ಮಾಡಿದಾಗ ಪ್ರತಿ ಕ್ವಿಂಟಲಿಗೆ ₹3 ಸಾವಿರ ದರವೂ ಲಭಿಸಿತು. ಇದರಿಂದ ಒಂದು ಎಕರೆಗೆ ₹81 ಸಾವಿರ ಲಭಿಸಿತು. ಇದಲ್ಲದೆ ಹೈಬ್ರಿಡ್ ಜೋಳದ ಮೇವು ಪ್ರತಿ ಸೂಡಿಗೆ ₹11 ರಂತೆ 1000 ಸೂಡಿಗೆ ₹11 ಸಾವಿರ ಲಭಿಸಿದೆ. ಅಂದರೆ 100 ದಿನದಲ್ಲಿ ಒಟ್ಟು ₹92 ಸಾವಿರ ಬಂದಂತಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಲ್ಲಿಕಾರ್ಜುನ ಬಸ್ತವಾಡಿ ಅವರು, ‘ಬೆಳೆ ಬೆಳೆಯಲು ಸಾಕಷ್ಟು ಅಂತರ ಬೇಕು. ಇದರಿಂದ ಬೆಳೆಗಳಿಗೆ ಸಾಕಷ್ಟು ಗಾಳಿ, ಬೆಳಕು ಹಾಗೂ ನೀರು ಲಭಿಸುತ್ತದೆ. ಹೀಗಾಗಿ ಉತ್ತಮ ಇಳುವರಿ ಬರಲು ಸಾಧ್ಯವಾಯಿತು’ ಎಂದರು. ಈ ಯಶಸ್ಸಿನಲ್ಲಿ ಹಿರಿಯ ಸಹೋದರ ಕಾಡೇಶ ಬಸ್ತವಾಡಿ ಅವರ ಶ್ರಮವೂ ಇದೆ. ರೈತರು ಹೆಚ್ಚಿನ ಮಾಹಿತಿಗಾಗಿ 9379020727 ಸಂಪರ್ಕಿಸಬಹುದು.