ಹೈದರಾಬಾದ್: ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನದ ಬಳಿಕ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಂಪುಟ ಸಹೋದ್ಯೋಗಿ ಅಮಿತ್ ಶಾ ‘ಆತಂಕ’ಕ್ಕೆ ಒಳಗಾಗಿದ್ದು, ಕಾಂಗ್ರೆಸ್ ಪಕ್ಷವನ್ನು ನಿಂದಿಸಲು ಪ್ರಾರಂಭಿಸಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ಅಭಿವೃದ್ಧಿ ವಿಚಾರ ಮುಂದಿಟ್ಟುಕೊಂಡು ಮತ ಕೇಳುವ ಬದಲು ಕಾಂಗ್ರೆಸ್ ನಾಯಕರನ್ನು ದೂಷಿಸುತ್ತಿದ್ದಾರೆ. ಮಾತ್ರವಲ್ಲ, ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
‘ಅದಾನಿ ಮತ್ತು ಅಂಬಾನಿ ಅವರು ಕಾಂಗ್ರೆಸ್‌ಗೆ ಟೆಂಪೊ ತುಂಬಾ ಹಣ ನೀಡುತ್ತಿದ್ದಾಗ ಮೋದಿ ಅವರು ಏನು ಮಾಡುತ್ತಿದ್ದರು’ ಎಂದು ಪ್ರಶ್ನಿಸಿದ ಅವರು, ಚುನಾವಣೆಯಲ್ಲಿ ಸೋಲು ಎದುರಾಗುವ ಆತಂಕದಲ್ಲಿ ಇದೀಗ ತಮ್ಮ ಪ್ರಣಾಳಿಕೆಯನ್ನು ಬಿಟ್ಟು, ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು.
‘ಟೆಂಪೊದಲ್ಲಿ ಹಣ ಕೊಂಡೊಯ್ಯುತ್ತಿದ್ದಾಗ ನೀವು ಸುಮ್ಮನೆ ನೋಡುತ್ತಾ ನಿಂತಿದ್ದೀರಾ? ಹಣ ಯಾರ ಮನೆಗೆ ಹೋಗಿದೆ ಎಂಬುದನ್ನು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಳ್ಳಿ. ನಿಮ್ಮ ಸಿಬಿಐ, ಐ.ಟಿ, ಇ.ಡಿ ಎಲ್ಲಿವೆ? ಇಂತಹ ಬಾಲಿಶ ಮಾತುಗಳು ಪ್ರಧಾನಿ ಹುದ್ದೆಯಲ್ಲಿರುವವರಿಗೆ ಸರಿ ಹೊಂದುವುದಿಲ್ಲ’ ಎಂದು ಹೇಳಿದರು.
ಪ್ರಧಾನಿ ‘ಸುಳ್ಳುಗಳ ಸರದಾರ’ ಎಂಬುದನ್ನು ಪುನರುಚ್ಚರಿಸಿದ ಅವರು, ಜಾತಿ ಗಣತಿ ವಿಚಾರದಲ್ಲಿ ಸಮಾಜದಲ್ಲಿ ಒಡಕು ಉಂಟುಮಾಡಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.
ತೆಲಂಗಾಣದ ಕಾಂಗ್ರೆಸ್ ಸರ್ಕಾರವು ಆರು ‘ಗ್ಯಾರಂಟಿ’ಗಳಲ್ಲಿ ಐದನ್ನು ಜಾರಿಗೆ ತಂದಿದೆ. ಚುನಾವಣಾ ನೀತಿ ಸಂಹಿತೆ ಇರುವುದರಿಂದ ಇನ್ನುಳಿದ ಒಂದು ಗ್ಯಾರಂಟಿ ಜಾರಿ ವಿಳಂಬವಾಗಿದೆ ಎಂದು ತಿಳಿಸಿದರು.
Laxmi News 24×7