ಬೆಂಗಳೂರು: 2024 ಲೋಕಸಭಾ ಚುನಾವಣೆಯಲ್ಲಿ (Loksabha Elections 2024) ಇಂಡಿಯಾ ಒಕ್ಕೂಟ (I.N.D.I.A) ಗೆದ್ದು ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿ (Karnataka) ಕಾವೇರಿ ನದಿಗೆ ನಿರ್ಮಿಸಲು ಯೋಜಿಸಿರುವ ಮೇಕೆದಾಟು ಅಣೆಕಟ್ಟು (Mekedatu) ಯೋಜನೆಯನ್ನು ತಡೆಯುವುದಾಗಿ ಡಿಎಂಕೆ ಪಕ್ಷ (DMK Party) ತನ್ನ ಪ್ರಣಾಳಿಕೆಯಲ್ಲಿ (DMK Manifesto) ಘೋಷಣೆ ಮಾಡಿದೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ವಿಪಕ್ಷ ನಾಯಕ ಆರ್ ಅಶೋಕ್ (R Ashok) ಅವರು, ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಮೇಕೆದಾಟು ಯೋಜನೆಯನ್ನು ಯಾವುದೇ ಕಾರಣಕ್ಕೂ ಜಾರಿ ಮಾಡಲು ಬಿಡುವುದಿಲ್ಲ ಎಂದು ತಮ್ಮ I.N.D.I. ಮಿತ್ರಪಕ್ಷ ಡಿಎಂಕೆ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆಯಲ್ಲ ಡಿಸಿಎಂ ಡಿಕೆ ಶಿವಕುಮಾರ್ ಅವರೇ, ಈಗ ‘ನಮ್ಮ ನೀರು, ನಮ್ಮ ಹಕ್ಕು’ ಎಂದು ತಮ್ಮ ಶಾಸಕರನ್ನು ಚೆನ್ನೈಗೆ ಕರೆದುಕೊಂಡು ಹೋಗಿ ಪ್ರತಿಭಟನೆ ಮಾಡುತ್ತೀರಾ ಅಥವಾ ರಾಹುಲ್ ಗಾಂಧಿ ಅವರನ್ನು ಮೆಚ್ಚಿಸಲು ಕನ್ನಡಿಗರ ಹಿತಾಸಕ್ತಿ ಬಲಿಕೊಟ್ಟು ರಾಜಿ ಮಾಡಿಕೊಳ್ಳುತ್ತೀರಾ? ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ, ಬೆಂಗಳೂರಿಗೆ ನೀರು ತರುತ್ತೇವೆ ಎಂದು ಮೇಕೆದಾಟು ಪಾದಯಾತ್ರೆ ಮಾಡಿ ಕನ್ನಡಿಗರ ಮೂಗಿಗೆ ತುಪ್ಪ ಸವರಿ ಅಧಿಕಾರಕ್ಕೇರಿದ ನಾಡದ್ರೋಹಿ ಕಾಂಗ್ರೆಸ್ ಸರ್ಕಾರ ಈಗ ಕನ್ನಡಿಗರ ಬೆನ್ನಿಗೆ ಚೂರಿ ಹಾಕುತ್ತಿದೆ ಎಂದು ಆರ್ ಅಶೋಕ್ ಕಿಡಿಕಾರಿದ್ದಾರೆ.
ನಿನ್ನೆಯಷ್ಟೇ ತಮಿಳುನಾಡಿನಲ್ಲಿ ಆಡಳಿತರೂಢ ಡಿಎಂಕೆ ಪಕ್ಷ ತನ್ನ ಲೋಕಸಭಾ ಚುನಾವಣೆಯ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಪ್ರಮುಖವಾಗಿ ಮೇಕೆದಾಟು ಯೋಜನೆಗೆ ತಡೆ ಒಡ್ಡುವುದಾಗಿ ಸಿಎಂ ಸ್ಟಾಲಿನ್ ಪಕ್ಷದ ಪ್ರಣಾಳಿಕೆ ಮೂಲಕ ಘೋಷಣೆ ಮಾಡಿದ್ದಾರೆ. ಆದರೆ ಇಂಡಿಯಾ ಒಕ್ಕೂಟದ ಪಕ್ಷವಾಗಿರುವ ಕಾಂಗ್ರೆಸ್ ಪಾರ್ಟಿ, ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿದ್ದು, ಇಲ್ಲಿ ಮೇಕೆದಾಟು ಯೋಜನೆ ಜಾರಿಗಾಗಿ ವಿಧಾನಸಭಾ ಚುನಾವಣೆಗೂ ಮುನ್ನ ಬೃಹತ್ ರ್ಯಾಲಿಯನ್ನು ಕೈಗೊಂಡಿತ್ತು. ಆದರೆ ಸದ್ಯ ಡಿಎಂಕೆ ಪಕ್ಷದ ನಡೆ ಭಾರೀ ಚರ್ಚೆಗೆ ಕಾರಣವಾಗಿದೆ.
ವಿಪಕ್ಷ ನಾಯಕ ಆರ್ ಅಶೋಕ್ ‘X’ ಪೋಸ್ಟ್
ಡಿಎಂಕೆ ಪಾರ್ಟಿ ಪ್ರಣಾಳಿಕೆ ಬಿಡುಗಡೆ ಮುನ್ನ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಚುನಾವಣೆಯಲ್ಲಿ ಕಾಂಗ್ರೆಸ್, ವಿಸಿಕೆ ಹಾಗೂ ಎಡ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಕಣಕ್ಕೆ ಇಳಿಯುತ್ತಿರುವ ಡಿಎಂಕೆ, 21 ಅಭ್ಯರ್ಥಿಗಳನ್ನು ಮಾತ್ರ ಘೋಷಣೆ ಮಾಡಿದ್ದು, ಉಳಿದ ಸ್ಥಾನಗಳನ್ನ ಮಿತ್ರಪಕ್ಷಗಳೊಂದಿಗೆ ಹಂಚಿಕೆ ಮಾಡಿಕೊಂಡಿದೆ.
ಡಿಎಂಕೆ ಪ್ರಣಾಳಿಕೆಯ ಹೈಲೈಟ್ಸ್
- ರಾಷ್ಟ್ರೀಕೃತ ಮತ್ತು ಶೆಡ್ಯೂಲ್ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮತ್ತು ಬಡ್ಡಿ ಮನ್ನಾ
- ವಿದ್ಯಾರ್ಥಿಗಳ ಶೈಕ್ಷಣಿಕ ಸಾಲ ಮನ್ನಾ
- ರಾಜ್ಯ ಪ್ರತಿ ಮಹಿಳೆಗೂ ತಿಂಗಳಿಗೆ 1000 ರೂಪಾಯಿ ಆರ್ಥಿಕ ನೆರವು
- ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಸಿಲಿಂಡರ್ ಬೆಲೆಗಳನ್ನು ಕ್ರಮವಾಗಿ ರೂ 75, ರೂ
- 65 ಮತ್ತು ರೂ 500 ಕ್ಕೆ ನಿಗದಿಪಡಿಸಲಾಗಿದೆ
- ನೀಟ್ ಪರೀಕ್ಷೆಯಿಂದ ತಮಿಳುನಾಡಿಗೆ ವಿನಾಯಿತಿ
- ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಬೂತ್‌ಗಳನ್ನು ಸಂಪೂರ್ಣವಾಗಿ ತೆಗೆದುಹಾಕುವುದು
- ಪೌರತ್ವ ತಿದ್ದುಪಡಿ ಕಾಯಿದೆ (CAA-2019) ರದ್ದು
- ಏಕರೂಪ ನಾಗರಿಕ ಸಂಹಿತೆಯ ಜಾರಿಗೆ ತಡೆ
- ‘ಒಂದು ರಾಷ್ಟ್ರ, ಒಂದು ಚುನಾವಣೆ’ ಯೋಜನೆಯನ್ನು ಕೈಬಿಡಲಾಗುವುದು
- ಕಾಲೇಜು ವಿದ್ಯಾರ್ಥಿಗಳಿಗೆ ತಿಂಗಳಿಗೆ ಒಂದು ಜಿಬಿ ಡೇಟಾ ನೊಂದಿಗೆ ಉಚಿತ ಸಿಮ್ ಕಾರ್ಡ್
- ಬ್ಯಾಂಕ್ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಇರಿಸದಿದ್ದರೆ ದಂಡವನ್ನು ರದ್ದುಗೊಳಿಸುವುದು
- ಭಾರತದಲ್ಲಿ ನೆಲೆಸಿರುವ ಶ್ರೀಲಂಕಾ ತಮಿಳರಿಗೆ ಪೌರತ್ವ ನೀಡುವುದು
ಏನಿದು ಮೇಕೆದಾಟು ವಿವಾದ?
ಮೇಕೆದಾಟು ಬೆಂಗಳೂರಿನಿಂದ 90 ಕಿಮೀ ದೂರದಲ್ಲಿದ್ದು ತಮಿಳುನಾಡಿನಿಂದ 4 ಕಿಮೀ ದೂರದಲ್ಲಿದೆ. ಜಲಾಶಯ ನಿರ್ಮಾಣದ ಕುರಿತು ಸವಿವರಾದ ವರದಿಯನ್ನು ಕರ್ನಾಟಕ ಸರಕಾರವು ಕೇಂದ್ರಕ್ಕೆ ಸಲ್ಲಿಸಿತ್ತು. 9,000 ಕೋಟಿಯ ಈ ಯೋಜನೆಯಿಂದ ಬೆಂಗಳೂರು ಹಾಗೂ ರಾಜ್ಯದ ಕೆಲವೊಂದು ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸುವುದು ಸರಕಾರದ ಉದ್ದೇಶವಾಗಿದೆ. ಮಳೆಗಾಲದ ಸಂದರ್ಭದಲ್ಲಿ ಹೆಚ್ಚು ನೀರು ತಮಿಳುನಾಡಿಗೆ ಹರಿದುಹೋಗುತ್ತಿರುವ ಕಾರಣ ಮೇಕೆದಾಟುವಿನಲ್ಲಿ ಅಣೆಕಟ್ಟು ಕಟ್ಟಿ ಮಹಾನಗರಗಳಲ್ಲಿರುವ ನೀರಿನ ಸಮಸ್ಯೆಗೆ ಇತಿಶ್ರೀ ಹಾಡುವುದು ಸರಕಾರದ ಆಶಯವಾಗಿದೆ. ಆದರೆ, ತಮಿಳುನಾಡು ಈ ಯೋಜನೆಯನ್ನು ವಿರೋಧಿಸುತ್ತಿದೆ. ಅಣೆಕಟ್ಟು ನಿರ್ಮಾಣದಿಂದ ನದಿಗೆ ಹರಿದುಬರುವ ಕಾವೇರಿ ನೀರಿಗೆ ಧಕ್ಕೆಯುಂಟಾಗಲಿದೆ ಎಂದು ಯೋಜನೆಗೆ ವಿರೋಧ ವ್ಯಕ್ತಡಿಸುತ್ತಿದೆ