ಕಲಬುರಗಿ: ಹಣಕಾಸಿನ ವಿಚಾರಕ್ಕೆ ಮೂವರು ಸ್ನೇಹಿತರು ಯುವಕನನ್ನು ಕೊಲೆ ಮಾಡಿದ್ದರು. ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ತಾರಫೈಲ್ ಬಡಾವಣೆ ನಿವಾಸಿಗಳಾದ ಸುನೀಲ್ ಅಲಿಯಾಸ್ ಸೋನು, ಶಿವಲಿಂಗ ಹುಲಿಮನಿ ಮತ್ತು ರಾಜು ಬಂಧಿತ ಆರೋಪಿಗಳು. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ತಾರಫೈಲ್ ಬಡಾವಣೆ ನಿವಾಸಿ ವಿಶಾಲ್‍ನನ್ನ ಜೂನ್ 26 ರಂದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ಮೃತ ವಿಶಾಲ್ ಆರೋಪಿ ಸುನೀಲ್ ತಾಯಿ ಬಳಿ 3 ಲಕ್ಷ ರೂಪಾಯಿ ಸಾಲ ಪಡೆದಿದ್ದನು. ಹೀಗಾಗಿ ಹಣವನ್ನು ವಾಪಸ್ ಕೊಡುವಂತೆ ಆರೋಪಿ ಸೋನು ಪದೇ ಪದೇ ಕೇಳುತ್ತಿದ್ದನು. ಆದರೆ ಮೃತ ವಿಶಾಲ್ ಹಣ ವಾಪಸ್ ಕೊಡದೆ ಸತಾಯಿಸುತ್ತಿದ್ದನು. ಇದರಿಂದ ಕೋಪಗೊಂಡ ಆರೋಪಿ ಸೋನು ಸ್ನೇಹಿತರ ಜೊತೆ ಸೇರಿ ಸಾಲ ವಾಪಾಸ್ ಕೊಡಲು ವಿಳಂಬ ಮಾಡಿದ್ದಕ್ಕೆ ನಾಗನಹಳ್ಳಿ ಕ್ರಾಸ್ ಬಳಿ ವಿಶಾಲನ ಹತ್ಯೆ ಮಾಡಲಾಗಿತ್ತು.
ನಾಗನಹಳ್ಳಿ ಕ್ರಾಸ್‍ನ ರಾಜಾಪುರ ನಾಲಾದ ಬ್ರಿಡ್ಜ್ ಬಳಿ ಕೊಳೆತ ಸ್ಥಿತಿಯಲ್ಲಿ ವಿಶಾಲ್ ಮೃತ ಸಿಕ್ಕಿತ್ತು. ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.