ದಾವಣಗೆರೆ: ದಾವಣಗೆರೆಯಲ್ಲಿ ಮಾಂಸ ಪ್ರಿಯರೇ ಹೆಚ್ಚು, ಅದರಲ್ಲೂ ಕೋಳಿ ಮಾಂಸವನ್ನು ಸೇವಿಸುವವರ ಸಂಖ್ಯೆ ಗಣನೀಯಾವಾಗಿದೆ. ಆದರೆ ಕೋಳಿ ಮಾಂಸ ಪ್ರಿಯರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ದಾವಣಗೆರೆಯ 180ಕ್ಕೂ ಹೆಚ್ಚು ಚಿಕನ್ ಅಂಗಡಿಗಳಲ್ಲಿ ಬೆಲೆ ಏರಿಕೆ ಮಾಡಲಾಗಿದ್ದು, ಗ್ರಾಹಕರು ಕೋಳಿ ಮಾಂಸ ಕೊಳ್ಳಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣ ಆಗಿದೆ.
ಬಿಸಿಲಿನ ತಾಪ ಹೆಚ್ಚಿದ್ದರಿಂದ ಕೋಳಿ ಸಾಕಣೆಗೆ ರೈತರಿಗೆ ಸವಾಲು ಎದುರಾಗಿದ್ದರಿಂದ ಕೋಳಿ ಸಾಕಣೆ ಕೇಂದ್ರಗಳಲ್ಲಿ ಕೋಳಿಗಳ ಸಂಖ್ಯೆ ಇಳಿಮುಖವಾಗಿದೆ. ಇದರಿಂದ ಕೋಳಿ ಮಾಂಸದ ಬೆಲೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ದರ ಹೆಚ್ಚಾಗಿದ್ದರಿಂದ ದಾವಣಗೆರೆ ನಗರದ 180 ಕೋಳಿ ಮಾಂಸದ ಅಂಗಡಿಗಳ ಪೈಕಿ 80ಕ್ಕೂ ಹೆಚ್ಚು ಅಂಗಡಿಗಳು ಬಂದ್ ಮಾಡಲಾಗಿದ್ದು, ದರ ಇಳಿಯುವ ತನಕ ಅಂಗಡಿ ಬಂದ್ ಆಗಿರುವ ಸಾಧ್ಯತೆ ದಟ್ಟವಾಗಿದೆ. ದಾವಣಗೆರೆ ಜಿಲ್ಲಾ ಹಲಾಲ್ ಕೋಳಿ ಮಾರಾಟ ಅಂಗಡಿದಾರರ ಸಂಘದಿಂದ ಸದ್ಯ ಕೋಳಿ ಮಾಂಸದ ಬೆಲೆಯನ್ನು ನಿಗದಿ ಮಾಡಲಾಗಿದೆ.
ಕೋಳಿ ಮಾಂಸದ ಬೆಲೆ : ಚರ್ಮ ರಹಿತ ಮಾಂಸದ ದರ 280 ರೂಪಾಯಿ ಇದ್ದು ಚರ್ಮಸಹಿತ ಕೋಳಿ ಮಾಂಸದ ಬೆಲೆ 250 ರಿಂದ 260 ಇದೆ. ಜೀವಂತ ಕೋಳಿ ಖರೀದಿ ಮಾಡಿದ್ರೇ 190 ರೂ ನಿಗದಿ ಮಾಡಲಾಗಿದೆ. ಎಲ್ಲ 180 ಅಗಂಡಿಗಳು ಒಂದೇ ದರ ಇದ್ದು, ಜನ ಖರೀದಿ ಮಾಡಲು ಹಿಂದೇಟು ಹಾಕ್ತಿದ್ದಾರೆ. ಇದರಿಂದ ಅಂಗಡಿ ಮಾಲೀಕರಿಗೆ ವ್ಯಾಪಾರ ಇಳಿಮುಖವಾಗಿದೆ.
ಈ ವೇಳೆ ದಾವಣಗೆರೆ ಜಿಲ್ಲಾ ಹಲಾಲ್ ಕೋಳಿ ಮಾರಾಟ ಅಂಗಡಿದಾರರ ಸಂಘದ ಜಿಲ್ಲಾಧ್ಯಕ್ಷರಾದ ಶಂಶು ತಬ್ರೀಜ್ ( ಚಾರ್ಲಿ) ಮಾತನಾಡಿ, ಬಿಸಿಲಿನ ತಾಪಮಾನ ಹಾಗೂ ರೈತರ ಬಳಿ ಕೋಳಿ ಸಿಗದ ಕಾರಣ ಈ ರೀತಿ ಬೆಲೆ ಏರಿಕೆಯಾಗಿದೆ. ಎರಡ್ಮೂರು ರೂಪಾಯಿ ಕಮ್ಮಿಯಾಗಿದ್ದು, ಗ್ರಾಹಕರು ಹೈರಾಣಾಗಿದ್ದಾರೆ, ಬೆಲೆ ಹೆಚ್ಚಾಗಿದ್ದರಿಂದ ಜನ ಬರುವುದು ಕಡಿಮೆ ಮಾಡಿದ್ದು, 180 ಅಂಗಡಿಗಳಿವೆ ಎಲ್ಲ ಅಂಗಡಿಗಳಲ್ಲೂ ಒಂದೇ ದರ ಫಿಕ್ಸ್ ಮಾಡಲಾಗಿದೆ, ರೈತರು ಕೋಳಿ ಉತ್ಪಾದನೆಯಲ್ಲಿ ಕುಸಿತ ಕಂಡಿರುವುದು ಸಮಸ್ಯೆಗೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದ್ದಾರೆ.