Breaking News

ಬರಡು ಭೂಮಿಯಲ್ಲಿ ಹಸಿರುಮಯ ಸುಂದರ ಉದ್ಯಾನವನ

Spread the love

ಚಿಕ್ಕೋಡಿ: ಹಸಿರೇ ದೇಶದ ಉಸಿರು ಅಂತೀವಿ. ಆದರೆ, ಈ ಮಾತಿನಂತೆ ಮುನ್ನಡೆಯುವವರು ಬೆರಳೆಣಿಕೆಯಷ್ಟು ಜನ ಮಾತ್ರ. ಇಲ್ಲೊಬ್ಬ ಅರಣ್ಯ ಇಲಾಖೆ ಅಧಿಕಾರಿ ಪರಿಸರ ಪ್ರೀತಿ ಮೆರೆದಿದ್ದಾರೆ. ಬಂಜರು ಭೂಮಿಯನ್ನು ಹಸಿರುಮಯವಾಗಿಸಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಯ ಪರಿಶ್ರಮದ ಫಲವಾಗಿ ಬರಡು ಭೂಮಿಯಲ್ಲಿ ಸಾವಿರಾರು ಮರಗಳು ಬೆಳೆದು ನಿಂತಿವೆ.

ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಪಾಳು ಬಿದ್ದಿರುವ ಜಮೀನಿನ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿ ಪ್ರಶಾಂತ್ ಗಾಣಿಗೇರ ವಿಶೇಷ ಕಾಳಜಿ ವಹಿಸಿದ್ದರು. ಹೀಗಾಗಿ ಈ ಪ್ರದೇಶ ನಂದನವನದಂತೆ ಕಂಗೊಳಿಸಿದೆ. ಉದ್ಯಾನವನಕ್ಕೆ ಸಿದ್ದೇಶ್ವರ ಟೀ ಪಾರ್ಕ್ ಎಂದು ಹೆಸರಿಡಲಾಗಿದೆ. 15 ಎಕರೆ ಪ್ರದೇಶದಲ್ಲಿ ಇಲಾಖೆಯು ಜನರ ಗಮನಸೆಳೆಯುವಂತೆ ಉದ್ಯಾನವನ ನಿರ್ಮಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಉದ್ಯಾನವನಕ್ಕೆ ಬರುವ ಜನರು ಇಲ್ಲಿನ ಸುಂದರ ವಾತಾವರಣ ಆಸ್ವಾದಿಸಿ ಖುಷಿಪಡುತ್ತಿದ್ದಾರೆ. ಮುಖ್ಯದ್ವಾರವು ಆಕರ್ಷಣೆಯಿಂದ ಕೂಡಿದೆ. ಒಳಗೆ ಕಾಲಿಡುತ್ತಿದ್ದಂತೆ ಪರಿಸರ ಮೇಲೆ ಆಗುತ್ತಿರುವ ಅತಿಕ್ರಮಣ ಕುರಿತು ಹಲವು ಬಿತ್ತಿಚಿತ್ರಗಳು ಗಮನಸೆಳೆಯುತ್ತವೆ. ಮನಸ್ಸಿಗೆ ತಟ್ಟುವ ವಿವರಣೆಗಳನ್ನು ಅವು ನೀಡುತ್ತವೆ.

ಶುದ್ಧ ನೀರಿನ ಘಟಕ, ಸುಸಜ್ಜಿತ ಶೌಚಾಲಯ: ವಾಯುವಿಹಾರಿಗಳಿಗೆ ಶುದ್ಧ ಕುಡಿಯುವ ನೀರನ್ನು ಘಟಕದಲ್ಲಿ ಸ್ಥಾಪನೆ ಮಾಡಲಾಗಿದೆ. ಸುಸಜ್ಜಿತ ಶೌಚಾಲಯ ಇದೆ. ನೀರಿಗೆ ಯಾವುದೇ ತೊಂದರೆ ಆಗಬಾರದೆಂದು ಎರಡು ಕೊಳವೆ ಬಾವಿಗಳನ್ನು ಕೊರೆಸಿ, ಉದ್ಯಾನವನದ ಸಸಿಗಳಿಗೆ ನೀರುಣಿಸಲಾಗುತ್ತಿದೆ. ಪಾಳುಬಿದ್ದ ಜಮೀನು ಗುರುತಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಅರಣ್ಯ ಇಲಾಖೆಯ 6 ಎಕರೆ ಹಾಗೂ ಕಂದಾಯ ಇಲಾಖೆ ಇನ್ನುಳಿದ ಜಮೀನನ್ನು ಬಳಸಿಕೊಂಡು ಗಮನಸೆಳೆಯುವಂತೆ ಉದ್ಯಾನವನ ನಿರ್ಮಾಣ ಮಾಡಲಾಗಿದೆ. ಆರು ಎಕರೆ ಪ್ರದೇಶದಲ್ಲಿರುವ ಕೆರೆಗೆ ಪಕ್ಕದಲ್ಲಿರುವ ಕೃಷ್ಣಾ ನದಿಯಿಂದ ನೀರು ಸೇರಿಸಿ, ಈ ಪ್ರದೇಶವನ್ನು ಇನ್ನಷ್ಟು ಆಕರ್ಷಕ ಮಾಡಬೇಕು ಎನ್ನುವುದು ಇಲ್ಲಿನ ಸ್ಥಳೀಯರ ಆಶಯ.

ಟ್ರೀ ಪಾರ್ಕ್​ನಲ್ಲಿವೆ 3,500ಕ್ಕೂ ಹೆಚ್ಚು ವಿವಿಧ ಗಿಡಗಳು: ಐನಾಪೂರ ಗ್ರಾಮದ ಸಿದ್ದೇಶ್ವರ ದೇವಸ್ಥಾನದ ಪಕ್ಕದ ಸುಮಾರು 15 ಎಕರೆ ಖಾಲಿ ಜಮೀನಿನಲ್ಲಿರುವ ಈ ಟ್ರೀ ಪಾರ್ಕ್‌ನಲ್ಲಿ 3,500ಕ್ಕೂ ಅಧಿಕ ವಿವಿಧ ಬಗೆಯ ಗಿಡಗಳು ತಲೆ ಎತ್ತಿನಿಂತಿವೆ. ವನಸ್ಪತಿ ಗಿಡಗಳನ್ನೇ ಹೆಚ್ಚು ಬೆಳೆಸಲಾಗಿದೆ. ಈ ಉದ್ಯಾನವನವನ್ನು ಸುತ್ತಮುತ್ತಲಿನ ತಾಲೂಕುಗಳಿಗೆ ಮಾದರಿ ಎನ್ನುವಂತೆ ನಿರ್ಮಿಸಲಾಗಿದೆ. ಕೆರೆಯ ಸುತ್ತ ವಾಕಿಂಗ್ ಲೇನ್‌ ಹಾಗೂ ಮಕ್ಕಳಿಗೆ ಆಟವಾಡಲು ವಿವಿಧ ಬಗೆಯ ಆಟಿಕೆ ಸಾಮಾನುಗಳು, ಕುಳಿತುಕೊಳ್ಳಲು ಪ್ಯಾರಾಬೋಲಾಗಳು, ಕಾರಂಜಿ, ಓಪನ್​ ಜಿಮ್​ ಉಪಕರಣಗಳು ಹಾಗೂ 31 ಸೋಲಾರ್​ ದೀಪಗಳನ್ನು ಉದ್ಯಾನದಲ್ಲಿ ಅಳವಡಿಸಲಾಗಿದೆ.

ಸರ್ಕಾರದಿಂದ ಬಂದ 85 ಲಕ್ಷ ಅನುದಾನದ ಜೊತೆಗೆ ಪರಿಸರಪ್ರೇಮಿಗಳಿಂದ ದೇಣಿಗೆ ಪಡೆದು, ತಮಗೆ ನೀಡುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಇತರೆ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ ಪ್ರಶಾಂತ ಗಾಣಿಗರ ಹಾಗೂ ಅವರ ಸಿಬ್ಬಂದಿ. ಸತತ ಪರಿಶ್ರಮದ ಫಲವಾಗಿ ಮಾದರಿ ಟ್ರೀ ಪಾರ್ಕ್ ನಿರ್ಮಾಣಗೊಂಡಿದೆ.

ಅರಣ್ಯ ಇಲಾಖೆ ಅಧಿಕಾರಿ ಪ್ರಶಾಂತ್ ಗಾಣಿಗೇರ ಮಾತನಾಡಿ, ”ಸರ್ಕಾರದಿಂದ ನಮ್ಮ ತಾಲ್ಲೂಕಿಗೆ ಟ್ರೀ ಪಾರ್ಕ್ ನಿರ್ಮಿಸುವಂತಹ ಯೋಜನೆ ಬಂದಿರುವುದು ಸುವರ್ಣಾವಕಾಶ. ನಮ್ಮೂರಿಗೆ ಏನಾದ್ರೂ ಒಂದು ಕೊಡುಗೆ ನೀಡಬೇಕೆೆನ್ನುವುದು ನಮ್ಮ ಮನದ ಹಂಬಲವಾಗಿತ್ತು. ಇದರಿಂದ ಸರ್ಕಾರದ ಕೆಲಸ ದೇವರ ಕೆಲಸ ಎಂಬ ವಾಕ್ಯವನ್ನು ಅಕ್ಷರಶಃ ಪಾಲನೆ ಮಾಡಿದ್ದೇವೆ. ಸರ್ಕಾರದ 85 ಲಕ್ಷ ರೂ. ಅನುದಾನದಲ್ಲಿ ಸುಸಜ್ಜಿತವಾದ ಸಿದ್ದೇಶ್ವರ ಟ್ರೀ ಪಾರ್ಕ್​ ಅಭಿವೃದ್ಧಿಪಡಿಸಲಾಗಿದೆ. 3,500ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಗಿದೆ. ವಾಕಿಂಗ್ ಲೇನ್‌, ಮಕ್ಕಳ ಆಟಿಕೆ ಸಾಮಾನುಗಳು, ಪ್ಯಾರಾಬೋಲಾಗಳು, ಕಾರಂಜಿ, ಓಪನ್​ ಜಿಮ್​ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಾಮಸ್ಥರ ನೆರವಿನಿಂದ ಸೋಲಾರ್ ದೀಪ​ಗಳನ್ನು ಕೂಡ ಅಳವಡಿಸಲಾಗಿದೆ” ಎಂದು ಅವರು ತಿಳಿಸಿದರು


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ