Breaking News

ಬಜೆಟ್ ನಲ್ಲಿ ಬೆಳಗಾವಿಗೆ ಹೇಳಿಕೊಳ್ಳುವ ಕೊಡುಗೆ ಯಾವವು ಇಲ್ಲ, ಹಳೆ ಯೋಜನೆಗಳನ್ನು ಮತ್ತೆ ಹೇಳಿದ ಸಿ ಎಂ..

Spread the love

ಬೆಳಗಾವಿ: ‘ಪ್ರಸಕ್ತ ಬಜೆಟ್‌ನಲ್ಲಿ ಕೂಡ ಬೆಳಗಾವಿ ಜಿಲ್ಲೆಗೆ ಹೇಳಿಕೊಳ್ಳುವಂಥ ಯಾವುದೇ ಕೊಡುಗೆ ನೀಡಿಲ್ಲ. ಹಳೆ ಪ್ರಸ್ತಾವಗಳನ್ನೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತೆ ಬಡಬಡಿಸಿದ್ದಾರೆ’ ಎಂದು ಜಿಲ್ಲೆಯ ಮುಖಂಡರು ವಿಶ್ಲೇಷಿಸಿದ್ದಾರೆ.

 

ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ, ಸತೀಶ ಜಾರಕಿಹೊಳಿ, ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಬಜೆಟ್‌ ನಿರಾಶಾದಾಯಕ ಎಂದು ಟೀಕಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಹಾಗೂ ವಾಣಿಜ್ಯ ಸಂಘಟನೆಗಳ ಕೆಲ ಮುಖಂಡರು ’25 ವರ್ಷಗಳ ದೂರದೃಷ್ಟಿ’ ಎಂದಿದ್ದಾರೆ.

ಏನಿದೇ, ಏನಿಲ್ಲ: ಈ ಭಾಗದ ಹೋರಾಟದ ಫಲ ಮಹದಾಯಿ ಯೋಜನೆಗೆ ₹1,000 ಕೋಟಿ ಘೋಷಿಸಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಿಸುವುದಾಗಿ ಹೇಳಿದ್ದಾರೆ. ಇದು ಈ ಹಿಂದೆಯೇ ಮಾಡಿದ ಘೋಷಣೆ. ಬಜೆಟ್‌ನಲ್ಲಿ ಪುನರುಚ್ಚರಿಸಲಾಗಿದೆ.

ಬೆಳಗಾವಿ-ಕಿತ್ತೂರು-ಧಾರವಾಡ ರೈಲು ಮಾರ್ಗದ ಕಾಮಗಾರಿಗೆ ಅಗತ್ಯವಿರುವ ಭೂ ಸ್ವಾಧೀನಕ್ಕೆ ₹500 ಕೋಟಿ ನೀಡಿದ್ದಾರೆ. ಖಾನಾಪುರ ತಾಲ್ಲೂಕು ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವ ಪ್ರಸ್ತಾವಗಳು ಮಾತ್ರ ಹೊಸದಾಗಿ ಸೇರಿಸಿದವು.

ಬಾಲಕೋಟೆ-ಕುಡಚಿ ರೈಲು ಮಾರ್ಗಕ್ಕೆ ರಾಜ್ಯದ ಪಾಲಿನ ಅನುದಾನ ಘೋಷಿಸಿದ್ದಾರೆ. ಇದರಲ್ಲಿ ಮಂಗಳೂರು, ಕಾರವಾರ, ಮುಂಬೈ ಮಾರ್ಗಗಳೂ ಸೇರಿವೆ.

ಚನ್ನಮ್ಮನ ಕಿತ್ತೂರು ಕೋಟೆಯಲ್ಲಿ ಅತ್ಯಾಧುನಿಕ ಬೆಳಕಿನ ವ್ಯವಸ್ಥೆ, ತ್ರಿ-ಡಿ ‍ಪ್ರದರ್ಶನ ವ್ಯವಸ್ಥೆ ಮಾಡುವುದಾಗಿ ತಿಳಿಸಲಾಗಿದೆ. ಇದಕ್ಕೆ ₹ 60 ಕೋಟಿ ಮೀಸಲಿಡಲಾಗಿದೆ. ಹಂಪಿ, ಬಾದಾಮಿ, ವಿಜಯಪುರ, ಬೀದರ್‌ ಕಟ್ಟಡಗಳನ್ನೂ ಸೇರಿಸಲಾಗಿದೆ. ಹೀಗಾಗಿ, ಕಿತ್ತೂರಿಗೆ ಬರುವ ಪಾಲು ಎಷ್ಟು ಎಂಬುದು ಸ್ಪಷ್ಟವಿಲ್ಲ. ಮೇಲಾಗಿ, ದಶಕದ ಹಿಂದೆಯೇ ₹ 1.5 ಕೋಟಿ ವೆಚ್ಚದಲ್ಲಿ ಇಂಥದ್ದೇ ಧ್ವನಿ ಬೆಳಕಿನ ವ್ಯವಸ್ಥೆ ಮಾಡಲಾಗಿದ್ದು, ಅದು ಈಗ ಪಳೆಯುಳಿಕೆಯಂತೆ ಅಲ್ಲೇ ಇದೆ.

ಕಿತ್ತೂರು ಕೆರೆ ಅಭಿವೃದ್ಧಿ ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ. ಇದು ಕೂಡ ಎರಡು ವರ್ಷಗಳ ಹಿಂದಿನ ಕಾಮಗಾರಿ.

ಬೆಳಗಾವಿಯಲ್ಲಿ ಭಾರಿ ಪ್ರಮಾಣದ ಸ್ವಯಂ ಚಾಲಿತ ವಾಹನ ಪರೀಕ್ಷಾ ಪಥ ಹಾಗೂ ಗೋಕಾಕ ನಗರದಲ್ಲಿ ಸ್ವಯಂ ಚಾಲಿತ ವಾಹನ ಪರೀಕ್ಷಾ ಪಥ ನಿರ್ಮಿಸುವ ಕುರಿತು ತಿಳಿಸಲಾಗಿದೆ. ಇದೇ ತರ ರಾಜ್ಯದ ಐದು ನಗರಳಿಗೆ ₹ 85 ಕೋಟಿ ಮೀಸಲಿಟ್ಟಿದ್ದಾರೆ.

ಸಂಗೊಳ್ಳಿಯಲ್ಲಿ ರಾಯಣ್ಣ ಸೈನಿಕ ಶಾಲೆ ನಿರ್ಮಿಸುವ ಯೋಜನೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗ ನೀಡಲಾಗಿದೆ. ಇದಕ್ಕೆ ಆಗ ₹ 50 ಕೋಟಿ ನೀಡಲಾಗಿತ್ತು. ಅದರ ಮೊತ್ತವನ್ನು ₹217 ಕೋಟಿಗೆ ಏರಿಸಲಾಗಿದೆ.

*

ಹುಸಿಯಾದ ನಿರೀಕ್ಷೆಗಳು

* ಕಿತ್ತೂರು ಕೋಟೆ-ಅರಮನೆ ಮಾದರಿಯ ಮರು ನಿರ್ಮಾಣಕ್ಕೆ ₹ 40 ಕೋಟಿ ಘೋಷಿಸಿ, ₹ 10 ಕೋಟಿ ಮಾತ್ರ ಮಂಜೂರು ಮಾಡಲಾಗಿದೆ. ಈ ಬಜೆಟ್‌ನಲ್ಲಾದರೂ ಪೂರ್ಣರೂಪ ಸಿಗಬಹುದು ಎಂಬ ನಿರೀಕ್ಷೆ ಇತ್ತು.

* ಬೆಳಗಾವಿ ವಿಮಾನ ನಿಲ್ದಾಣ ಅಭಿವೃದ್ಧಿಗೆ 100 ಎಕರೆ ಜಮೀನು ಪಡೆಯುವ ಸಂಬಂಧ ಭೂಸ್ವಾಧೀನಕ್ಕೆ ಜಿಲ್ಲಾಡಳಿತ ಪ್ರಸ್ತಾವ ಸಲ್ಲಿಸಿತ್ತು. ಈ ಯೋಜನೆ ಗಣನೆಗೆ ತೆಗೆದುಕೊಂಡಿಲ್ಲ.

* ಕಾಡಾನೆ ಹಾವಳಿ ನಿಯಂತ್ರಣಕ್ಕೆ ₹150 ಕೋಟಿ ಅನುದಾನ, 199 ಸಿಬ್ಬಂದಿ ನೇಮಕ ಪ್ರಸ್ತಾಪಿಸಲಾಗಿದೆ. ಆದರೆ, ಇದರಲ್ಲಿ ಖಾನಾಪುರ ತಾಲ್ಲೂಕು ಕೈಬಿಡಲಾಗಿದೆ.

* ವಿವಿಧ ಕೇಂದ್ರ ಕಾರಾಗೃಹಗಳಿಗೆ ಸಿಬ್ಬಂದಿ ಕೊರತೆ, ಭದ್ರತಾ ಲೋಪ ನಿವಾರಣೆಗೆ ಆದ್ಯತೆ ನೀಡಲಾಗಿದೆ. ಆದರೆ, ಹಿಂಡಲಗಾ ಜೈಲು ಕೈದಿಗಳಿಂದ ತುಂಬಿ ಹೋಗಿದೆ. ಸಿಬ್ಬಂದಿ ಕೊರತೆಯಿಂದ ಬಳಲುತ್ತಿದ್ದರೂ ಪರಿಗಣಿಸಿಲ್ಲ.

* ಬೆಳಗಾವಿ ಜಿಲ್ಲೆ ವಿಭಜಿಸುವ ಬೇಡಿಕೆಗೆ ದಶಕ ಕಳೆದರೂ ಸ್ಪಂದಿಸಿಲ್ಲ.

*

ಬಜೆಟ್‌: ಇವರೇನಂತಾರೆ?

‘ನಿರುದ್ಯೋಗಕ್ಕೆ ಪರಿಹಾರಗಳಿಲ್ಲ’

ಚುನಾವಣೆ ದೃಷ್ಟಿಯಿಂದ ಹೆಣೆಯಲಾದ, ಬುಡವಿಲ್ಲದ ಬಜೆಟ್‌ ಇದು. ನಿರುದ್ಯೋಗ ನಿವಾರಣೆಗೆ ಯಾವ ಕ್ರಮವೂ ಇಲ್ಲ. ತಾಂಡವಾಡುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಹ ಯಾವುದೇ ಕ್ರಮಗಳಿಲ್ಲ. ಎಂಎಸ್‌ಎಂಇಗಳನ್ನು ಸ್ಥಾಪಿಸುವ ಕ್ರಮಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಕಿವಿಗೆ ಹೂ ಮುಡಿಸುವ ಯತ್ನ ಮಾಡಿದ್ದಾರೆ’ ಎಂದು ಹೇಳಿದ್ದಾರೆ.

-ಲಕ್ಷ್ಮೀ ಹೆಬ್ಬಾಳಕರ, ಶಾಸಕಿ

‘ಚುನಾವಣೆ ಗಿಮಿಕ್‌’

ಚುನಾವಣೆ ಗಿಮಿಕ್‌ ಬಜೆಟ್‌ ಇದು. ಉತ್ತರ ಕರ್ನಾಟಕಕ್ಕೆ ಯಾವುದೇ ರೀತಿ ಅನುಕೂಲಕರವಾಗಿಲ್ಲ. ಬಿಜೆಪಿ ಸರ್ಕಾರ ರಾಜ್ಯವನ್ನು ಸಾಲದ ಹೊರೆಯಲ್ಲಿ ಮುಳುಗಿಸಿದೆ. ಬಜೆಟ್ ನೋಡಿದರೆ ಡಬಲ್ ಎಂಜಿನ್‌ ಸರ್ಕಾರವಲ್ಲ, ಡಬ್ಬಾ ಎಂಜಿನ್ ಸರ್ಕಾರ ಎಂಬುದು ಗೊತ್ತಾಗುತ್ತಿದೆ.

-ಸತೀಶ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ

‘ಕೃಷ್ಣಾ ಮೇಲ್ದಂಡೆಗೆ ಕಾಯಕಲ್ಪ’

ಕೃಷ್ಣಾ ಮೇಲ್ದಂಡೆ ಯೋಜನೆಯ ಭೂ ಸ್ವಾಧೀನ ಪ್ರಕ್ರಿಯೆಗೆ ₹5,000 ಕೋಟಿ ಅನುದಾನ ನಿಗದಿಪಡಿಸಿರುವುದು ಯೋಜನೆಗೆ ವೇಗೋತ್ಕರ್ಷ ನೀಡಲಿದೆ. ಮಹಾದಾಯಿ ಯೋಜನೆಗೆ ₹1,000 ಕೋಟಿ ಮತ್ತು ಮೇಕೆದಾಟು ಯೋಜನೆಯ ಕಾನೂನು ಹೋರಾಟ ಮುಂದುವರೆಸುವುದಾಗಿ ಪ್ರಕಟಿಸಿರುವುದು ರಾಜ್ಯದ ಪ್ರತಿಷ್ಠಿತ ನೀರಾವರಿ ಯೋಜನೆ ಅನುಷ್ಟಾನಕ್ಕೆ ಸರ್ಕಾರದ ಬದ್ಧತೆ ತೋರಿದೆ.

-ಗೋವಿಂದ ಎಂ. ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ

‘ಐತಿಹಾಸಿಕ ಹೆಜ್ಜೆ’

ಕೃಷಿ ಕ್ಷೇತ್ರಕ್ಕೆ ₹39 ಸಾವಿರ ಕೋಟಿ, ಗ್ರಾಮ ಪಂಚಾಯಿತಿ ಅನುದಾನ ₹64 ಲಕ್ಷಕ್ಕೆ ಏರಿಕೆ, ಮಹಿಳಾ ಸಬಲೀಕರಣಕ್ಕೆ ₹46 ಸಾವಿರ ಕೋಟಿ, ಶಿಕ್ಷಣ ಕ್ಷೇತ್ರಕ್ಕೆ ₹38 ಸಾವಿರ ಕೋಟಿ, 56 ಲಕ್ಷ ಸಣ್ಣ ರೈತರಿಗೆ ₹180 ಕೋಟಿಯಲ್ಲಿ ಜೀವನ ಜ್ಯೋತಿ ವಿಮಾ ಯೋಜನೆ ಜಾರಿಗೆ ತಂದಿರುವುದ ಐತಿಹಾಸಿಕ ನಿರ್ಧಾರ.

-ಸಂಜಯ ಪಾಟೀಲ, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ

‘ರೈತರಿಗೆ ನೀಡಿಲ್ಲ ಇಡಗಂಟು’

ಸರ್ಕಾರ ರೈತರನ್ನು ಹೆಚ್ಚಿನ ಸಾಲಕ್ಕೆ ಪ್ರೋತ್ರಾಹಿಸಿದೆ. ₹5 ಲಕ್ಷ ಬಡ್ಡಿ ರಹಿತ ಸಾಲವು ಅಲ್ಪಾವಧಿಯದ್ದು, ಅವಧಿ ಮುಗಿದ ಬಳಿಕ ಮಾರುಕಟ್ಟೆಯ ಬಡ್ಡಿ ವಸೂಲಿ ಮಾಡುತ್ತಾರೆ. ಇದರ ಬದಲು ₹ 10 ಸಾವಿರ ಕೋಟಿಯ ಇಡಗಂಟು ಘೋಷಣೆ ಮಾಡಿ ಎಂದು ಕೇಳಿದ್ದೇವು. ಈ ರೀತಿ ಒಮ್ಮೆ ಇಡಗಂಟು ಇಟ್ಟರೆ ಯಾವುದೇ ತರಹದ ಪ್ರಕೃತಿ ವಿಕೋಪ, ಬೆಳೆ ನಷ್ಟದಲ್ಲೂ ರೈತರ ನೆರವಿಗೆ ಹಣ ಸಿಗುತ್ತದೆ. ನೀರಾವರಿ, ರಸ್ತೆ, ಕಾಲುವೆಗೆ ಸಾವಿರಾರು ಕೋಟಿ ಹಣ ಘೋಷಣೆ ಮಾಡುವ ಸರ್ಕಾರ ಒಂದು ಬಾರಿ ಇಡಗಂಟು ಏಕೆ ನೀಡುತ್ತಿಲ್ಲ? ಕಬ್ಬಿಗೆ ವಿಮೆ ಅಳವಡಿಸಿ ಎಂದರೆ ಏಕೆ ಕೊಡುತ್ತಿಲ್ಲ? ಕೇವಲ ಪ್ರಶಸ್ತಿ-ಪುರಸ್ಕಾರ ಕೊಟ್ಟರೆ ರೈತರ ಹೊಟ್ಟೆ ತುಂಬುವುದಿಲ್ಲ.

-ಸಿದಗೌಡ ಮೋದಗಿ, ರಾಜ್ಯ ಘಟಕದ ಅಧ್ಯಕ್ಷ, ಭಾರತೀಯ ಕೃಷಿಕ ಸಮಾಜ (ಸಂಯುಕ್ತ)

‘ಮಾತು ತಪ್ಪಿದ ಮುಖ್ಯಮಂತ್ರಿ’

ಮುಗಳಖೋಡದಲ್ಲಿ ನಡೆದ ಮಾಳಿ ಮಾಲಗಾರ ಸಮಾವೇಶದಲ್ಲಿ ಸಿ.ಎಂ ಬಸವರಾಜ ಬೊಮ್ಮಾಯಿ ಅವರು ಮಾಳಿ ಮಾಲಗಾರ ನಿಗಮ ಸ್ಥಾಪಿಸುವುದಾಗಿ ಮಾತುಕೊಟ್ಟಿದ್ದರು. ಆದರೆ, ಬಜೆಟ್‌ನಲ್ಲಿ ಅದು ಈಡೇರಿಲ್ಲ. ಸಾವಿತ್ರಿಬಾಯಿ ಫುಲೆ ಮತ್ತು ಜ್ಯೋತಿಬಾ ಫುಲೆ ಅವರ ಹೆಸರಿನಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಮತ್ತು ವಿದ್ಯಾರ್ಥಿ ವೇತನ ಹಾಗೂ ನೆಲ್ಲೂರು ನಿಂಬೆಕ್ಕ ಅವರ ಹೆಸರಿನಲ್ಲಿ ಪ್ರಾಧಿಕಾರ ರಚಿಸುವುದಾಗಿ ಭರವಸೆ ನೀಡಿದ್ದರು. ಮಾತು ಕೊಟ್ಟು ತಪ್ಪಿದ್ದಾರೆ. ಇದರ ವಿರುದ್ಧ ಪ್ರತಿಭಟನೆ ಮಾಡಲಾಗುವುದು.

-ಡಾ.ಸಿ.ಬಿ. ಕುಲಗೋಡ, ಅಧ್ಯಕ್ಷ, ಮಾಳಿ/ಮಾಲಗಾರ ನಿಯೋಗ


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ