Breaking News

ಸವದತ್ತಿ : ಹಾಳು ಕೊಂಪೆಯಾದ ‘ಮಿನಿಹಂಪಿ’

Spread the love

ಹೂಲಿ (ಸವದತ್ತಿ ತಾ.): ಮೈ ನವಿರೇಳಿಸುವಂಥ ಶಿಲ್ಪಕಲಾಕೃತಿ ಹೊಂದಿದ ಈ ಜಾಗ ಹಾಳು ಕೊಂಪೆಯಾಗಿದೆ. ಶಿಲ್ಪವೈಭವದ ಶ್ರೀಮಂತಿಕೆಯ ಕಾರಣದಿಂದ ಇದಕ್ಕೆ ‘ಮಿನಿಹಂಪಿ’ ಎಂದೇ ಕರೆಯಲಾಗುತ್ತದೆ. ರೋಮಾಂಚಕ ಇತಿಹಾಸವನ್ನು ತನ್ನ ಒಡಲೊಳಗೆ ಹುದುಗಿಸಿ ಇಟ್ಟುಕೊಂಡ ಮಂದಿರಗಳು, ಕಟ್ಟಡಗಳು ದುಷ್ಕರ್ಮಿಗಳ ಉಪಟಳಕ್ಕೆ ನಲುಗಿ ಹೋಗಿವೆ.

 

ಸವದತ್ತಿಯಿಂದ ರಾಮದುರ್ಗಕ್ಕೆ ಹೋಗುವ ಮಾರ್ಗದಲ್ಲಿ ಸಿಗುವ ಹೂಲಿ ಎಂಬ ಗ್ರಾಮದ ಕತೆ-ವ್ಯಥೆ ಇದು. ಪುರಾತನ ಕಾಲದ 101 ದೇವಸ್ಥಾನಗಳು, 101 ಬಾವಿಗಳನ್ನು ಹೊಂದಿದ್ದು ಈ ಊರಿನ ಹಿರಿಮೆ. ರಾಜ್ಯ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ವ್ಯಾಪ್ತಿಗೆ ಈ ದೇವಸ್ಥಾನಗಳು ಸೇರಿವೆ. ಆದರೆ, ಸುಧಾರಣೆ ಇಲ್ಲದೇ, ಕಾವಲು ಇಲ್ಲದೇ, ಕನಿಷ್ಠ ರಕ್ಷಣೆಯೂ ಇಲ್ಲದೇ ದುಷ್ಕರ್ಮಿಗಳ ದಾಳಿಗೆ ಸಿಲುಕಿವೆ.

ಒಂದೆಡೆ ಪುರಾತತ್ವ ಇಲಾಖೆ, ಇನ್ನೊಂದೆಡೆ ‍ಪ್ರವಾಸೋದ್ಯಮ ಇಲಾಖೆ ಮತ್ತೊಂದೆಡೆ ಗ್ರಾಮಸ್ಥರು; ಈ ಮೂವರ ನಿರ್ಲಕ್ಷ್ಯದ ಕಾರಣ ಇಲ್ಲಿ ಶಿಲ್ಪಸುಂದರಿಯರು ರೋದಿಸುವಂತಾಗಿದೆ.

ಅಕ್ರಮ ಚಟುವಟಿಕೆ: ‘ಸಂಜೆಯಾಗುತ್ತಿದ್ದಂತೆ ಕಿಡಿಗೇಡಿಗಳು ಇಲ್ಲಿಗೆ ಬಂದು, ಮೋಜು- ಮಸ್ತಿ ಮಾಡುತ್ತಾರೆ. ದೇವಸ್ಥಾನಗಳಲ್ಲೇ ಮದ್ಯದ ಪ್ಯಾಕೆಟ್‌ ಎಸೆದು ಹೋಗಿದ್ದಾರೆ. ಗಿಡಗಂಟಿಗಳೇ ಸುತ್ತುವರಿದ ಕಾರಣ, ಪುರಾತನ ದೇವಾಲಯಗಳಿಗೆ ಸುರಕ್ಷತೆಯೇ ಇಲ್ಲ’ ಎಂದು ಗ್ರಾಮಸ್ಥ ನಿಂಗಪ್ಪ ಕುಂಬಾರ ‘ಪ್ರಜಾವಾಣಿ’ ಎದುರು ಬೇಸರ ತೋಡಿಕೊಂಡರು.

‘ಈ ಸ್ಮಾರಕಗಳ ವೀಕ್ಷಣೆಗೆ ದೇಶ ಮಾತ್ರವಲ್ಲದೆ; ವಿದೇಶದಿಂದಲೂ ಪ್ರವಾಸಿಗರು ಬರುತ್ತಾರೆ. ಅವುಗಳ ದಯನೀಯ ಸ್ಥಿತಿ ಕಂಡು ಬೇಸರದಿಂದ ಮರಳುವುದು ಸಾಮಾನ್ಯವಾಗಿದೆ’ ಎಂದು ಅವಲತ್ತುಕೊಂಡರು.

ನಿಖರ ಮಾಹಿತಿ ಸಿಗುತ್ತಿಲ್ಲ: ಗ್ರಾಮದ ಉತ್ತರ ದಿಕ್ಕಿನಲ್ಲಿ ಇರುವ ಈ ದೇವಾಲಯಗಳಿಗೆ ತೆರಳಲು ರಸ್ತೆ ಇಲ್ಲ. ಸೂಚನಾ ಫಲಕಗಳನ್ನೂ ಅಳವಡಿಸಿಲ್ಲ. ಹೂಲಿಯ ಗತವೈಭವ ಅರಿಯಲು ಬರುವ ಪ್ರವಾಸಿಗರಿಗೆ ನಿಖರವಾದ ಮಾಹಿತಿ ನೀಡಲು ಗೈಡ್‌ಗಳಿಲ್ಲ.

‘ಒಂದು ಕಾಲಕ್ಕ ನಮ್ಮೂರಾಗ್‌ ಸಾಕಷ್ಟು ದೇವಸ್ಥಾನ ಮತ್ತು ಬಾವಿ ಇದ್ದವು ಅಂತ ಹಿರ್‍ಯಾರ ಹೇಳ್ತಿದ್ರು. ಆದರೀಗ ಒಂದಿಷ್ಟ ದೇವಸ್ಥಾನ ಉಳಿದಾವು. ಯಾರ ಬಳಿ ಅವುಗಳ ಮಾಹಿತಿಯೂ ಸಮರ್ಪಕವಾಗಿಲ್ಲ’ ಎಂದು ರಮೇಶ ಹುಜರತ್ತಿ ಬೇಸರಿಸಿದರು.

ಇದಕ್ಕೆ ಧ್ವನಿಗೂಡಿಸಿದ ಗ್ರಾಮಸ್ಥರ ಮಹಾಂತೇಶ ಅಂತಕ್ಕನವರ, ‘ಹಲವು ಸ್ಮಾರಕಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವುದರಿಂದ ಹೂಲಿಗೆ ಪ್ರೇಕ್ಷಣೀಯ ಸ್ಥಳ ಎನ್ನುತ್ತಾರೆ. ಆದರೆ, ಇಲ್ಲಿ ಕನಿಷ್ಠ ಮೂಲ ಸೌಲಭ್ಯವೂ ಇಲ್ಲ. ಆದರೆ, ಅಧಿಕಾರಿಗಳೂ ಇದಕ್ಕೂ ತಮಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿರುವುದರಿಂದ ಪ್ರವಾಸಿಗರು ಹೆಜ್ಜೆ ಹೆಜ್ಜೆಗೂ ಪರದಾಡುವಂತಾಗಿದೆ’ ಎಂದು ಅಳಲು ತೋಡಿಕೊಂಡರು.

‘ಪುರಾತನ ದೇವಾಲಯಗಳ ಸುತ್ತ ತಂತಿಬೇಲಿ ಅಳವಡಿಸುವ ಮೂಲಕ ಕುಡುಕರ ಹಾವಳಿಗೆ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿದರು


Spread the love

About Laxminews 24x7

Check Also

ಪಕ್ಷವಿರೋಧಿ ಚಟುವಟಿಕೆ ನಡೆಸುತ್ತಿರುವ ವಿಜಯೇಂದ್ರ ವಿರುದ್ಧವೂ ನೋಟೀಸ್ ಜಾರಿಯಾಗಬೇಕು: ರಮೇಶ್ ಜಾರಕಿಹೊಳಿ

Spread the loveದೆಹಲಿ: ಪ್ರಸ್ತುತವಾಗಿ ನಾವು ವಕ್ಫ್ ವಿರುದ್ಧ ಮಾಡಿದ ಹೋರಾಟದ ವರದಿಯನ್ನು ಜೆಪಿಸಿಗೆ ನೀಡಲು ಬಂದಿದ್ದೇವೆ, ಮುಂದಿನ ಸಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ