ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುದ್ದೇಬಿಹಾಳ ಸಾರಿಗೆ ಘಟಕದ ಚಾಲಕ ಕಂ ನಿರ್ವಾಹಕ ಸಿ.ಆರ್.ಪತ್ತೇಪೂರ ಅವರು ಪ್ರಯಾಣಿಕರೊಬ್ಬರು ಬಸ್‍ನಲ್ಲಿ ಬಿಟ್ಟು ಹೋಗಿದ್ದ ಅಂದಾಜು 3 ಲಕ್ಷ ಮೌಲ್ಯದ ಚಿನ್ನದ ಸಾಮಗ್ರಿ ಇರುವ ಬ್ಯಾಗ್ ಅನ್ನು ವಾರಸುದಾರರಿಗೆ ಮರಳಿಗೆ ಪ್ರಾಮಾಣಿಕತೆ ಮೆರೆದ ಘಟನೆ ನಡೆದಿದೆ. ಮುದ್ದೇಬಿಹಾಳ- ನಾಲತವಾಡ-ನಾರಾಯಣಪುರ ತಡೆ ರಹಿತ ಬಸ್‍ಗೆ ಪತ್ತೇಪೂರ ಅವರು ಚಾಲಕ ಕಂ ನಿರ್ವಾಹಕರಾಗಿ ಕರ್ತವ್ಯದಲ್ಲಿದ್ದರು.
ಸಂಜೆ 6 ಗಂಟೆ ಸುಮಾರಿಗೆ ಮುದ್ದೇಬಿಹಾಳದಿಂದ ನಾಲತವಾಡಕ್ಕೆ ಪ್ರಯಾಣಿಸಿದ್ದ ಮಹಿಳಾ ಪ್ರಯಾಣಿಕರೊಬ್ಬರು ಕಿವಿಯೋಲೆ, ಉಂಗುರ, ಬೋರಮಾಳ, ಚೈನ್ ಮುಂತಾದ ಚಿನ್ನದ ಆಭರಣಗಳಿದ್ದ ಬ್ಯಾಗನ್ನು ಸೀಟಿನಲ್ಲೇ ಮರೆತು ಇಳಿದು ಹೋಗಿದ್ದರು. ಸೀಟಿನ ಮೇಲೆ ಇದ್ದ ಬ್ಯಾಗನ್ನು ಗಮನಿಸಿದ ಪತ್ತೇಪೂರ ಅವರು ಯಾರೋ ಪ್ರಯಾಣಿಕರು ಬಿಟ್ಟು ಹೋಗಿರಬಹುದು ಎಂದು ಭಾವಿಸಿ ಅದನ್ನು ಜೋಪಾನವಾಗಿ ತೆಗೆದಿರಿಸಿದ್ದರು.
ಬಸ್ಸು ಮರಳಿ ಮುದ್ದೇಬಿಹಾಳದತ್ತ ಬಂದಾಗ ಬ್ಯಾಗ್ ಬಿಟ್ಟು ಹೋಗಿದ್ದ ಮಹಿಳೆ ಆಫ್ರೀನ್ ನಾಯ್ಕೋಡಿ ತನ್ನ ಪತಿಯ ಸಮೇತ ಇಲ್ಲಿನ ಸಾರಿಗೆ ಘಟಕಕ್ಕೆ ಧಾವಿಸಿ ಬಂದು ಇಂಥ ಬಸ್‍ನಲ್ಲಿ ಬ್ಯಾಗ್ ಬಿಟ್ಟು ಹೋಗಿದ್ದು ಸಿಕ್ಕಿದೆಯೇ ಎಂದು ವಿಚಾರಿಸತೊಡಗಿದ್ದರು. ಅವರ ಮುಖದಲ್ಲಿ ಗಾಭರಿ, ಆತಂಕ ಎದ್ದು ಕಾಣುತ್ತಿತ್ತು. ಪತ್ತೇಪೂರ ಅವರು ತಮಗೆ ಸಿಕ್ಕ ಬ್ಯಾಗನ್ನು ಘಟಕದ ಭದ್ರತಾ ಸಿಬ್ಬಂದಿ ಮತ್ತು ಸಾರಿಗೆ ನಿರೀಕ್ಷಕರ ಸುಪರ್ದಿಗೆ ಒಪ್ಪಿಸಿದ್ದರು. ಈ ವಿಷಯ ತಿಳಿದ ಪತ್ತೇಪೂರ ಅವರು ಮಹಿಳೆ ಮತ್ತು ಆಕೆಯ ಪತಿಯನ್ನು ಘಟಕದ ಭದ್ರತಾ ಸಿಬ್ಬಂದಿ ಕೊಠಡಿಗೆ ಕರೆದೊಯ್ದು ಬ್ಯಾಗ್‍ನೊಳಗೆ ಏನೇನು ಇದ್ದವು ಎಂದು ಕೇಳಿ ತಿಳಿದರು.
ನಂತರ ಎಲ್ಲರ ಸಮ್ಮುಖ ಮಹಿಳೆಗೆ ಬ್ಯಾಗ್ ನೀಡಿ ಅದರಲ್ಲಿರುವ ಚಿನ್ನದ ಆಭರಣಗಳು ಜೋಪಾನವಾಗಿರುವುದನ್ನು ಪರಿಶೀಲಿಸಲು ತಿಳಿಸಿದರು. ದುಗುಡ, ಗಾಭರಿಯಿಂದಲೇ ಬ್ಯಾಗ್‍ನಲ್ಲಿದ್ದ ಕೆಲ ಸಣ್ಣಪುಟ್ಟ ಬ್ಯಾಗ್ ಪರಿಶೀಲಿಸಿ ಚಿನ್ನದ ಆಭರಣಗಳನ್ನು ತೆಗೆದು ನೋಡಿ ಎಲ್ಲವೂ ಜೋಪಾನವಾಗಿವೆ ಎಂದು ಆಫ್ರೀನ್ ತಿಳಿಸಿ ಪತ್ತೇಪೂರ ಅವರಿಗೆ ಕೃತಜ್ಞತೆ ತಿಳಿಸಿದರು.
Laxmi News 24×7