ದಾವಣಗೆರೆ: ರಾಜ್ಯ ಸರಕಾರದ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಹಾಗೂ ಸಾಮಾಜಿಕ ಪರಿಶೋಧನ ನಿರ್ದೇಶನಾಲಯವು ಶಾಲೆಗಳಲ್ಲಿ ಮಧ್ಯಾಹ್ನದ ಉಪಹಾರ ಯೋಜನೆಗೆ ಸಂಬಂಧಿಸಿ ಶುಚಿತ್ವ-ವ್ಯವಸ್ಥಿತ ನಿರ್ವಹಣೆ ಕುರಿತು ನೀಡಿದ ಮಹತ್ವದ ಶಿಫಾರಸುಗಳಿಗೆ ಪೂರಕವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯದ ಎಲ್ಲ ಶಾಲೆಗಳ ಬಿಸಿಯೂಟ ಯೋಜನೆಯ ಅಡುಗೆ ಸಿಬಂದಿಗೆ ವಿಶೇಷ ತರಬೇತಿ ನೀಡಲು ಮುಂದಾಗಿದೆ.
ಶಾಲಾ ಅಡುಗೆ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸಿಬಂದಿಗೆ ಪ್ರಸಕ್ತ ತಿಂಗಳಲ್ಲೇ ಒಂದು ದಿನದ ತರಬೇತಿ ನೀಡಲು ರಾಜ್ಯದ ಎಲ್ಲ ಶೈಕ್ಷಣಿಕ ಜಿಲ್ಲೆಗಳ ಅಕ್ಷರ ದಾಸೋಹ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದೆ. ತರಬೇತಿಯನ್ನು ತಾಲೂಕು ಮಟ್ಟದಲ್ಲಿ ನಡೆಸಲಾಗುತ್ತಿದ್ದು, ಇದಕ್ಕಾಗಿ ಒಬ್ಬರಿಗೆ ದಿನಕ್ಕೆ 100 ರೂ. ವೆಚ್ಚ ಭರಿಸಲು ಅಕ್ಷರ ದಾಸೋಹ ಶಿಕ್ಷಣಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಅಡುಗೆ ಸಿಬಂದಿಯ ನಿರ್ದಿಷ್ಟ ಕೆಲಸಗಳು ಹಾಗೂ ಪಡೆಯುವ ಸೌಲಭ್ಯಗಳ ಬಗ್ಗೆ ಪರಿಚಯಿಸಿ ಕೊಡಬೇಕು. ಅಡುಗೆ ಕೇಂದ್ರಗಳಲ್ಲಿ ಸ್ವತ್ಛತೆ, ನೈರ್ಮಲ್ಯ ಮತ್ತು ಸುರಕ್ಷತ ಕ್ರಮಗಳ ಅರಿವು ಹಾಗೂ ನಿರ್ವಹಣೆಯ ಬಗ್ಗೆ ಮಾರ್ಗದರ್ಶನ ನೀಡಬೇಕು ಸೇರಿದಂತೆ ಅಡುಗೆ ಹಾಗೂ ಅಡುಗೆ ಕೇಂದ್ರದ ನಿರ್ವಹಣೆ ಬಗ್ಗೆ ವಿವಿಧ ವಿಷಯಗಳ ಕುರಿತು ತಜ್ಞರಿಂದ ಅನುಭವಿಗಳಿಗೆ ಉಪನ್ಯಾಸ, ಪ್ರಾತ್ಯಕ್ಷಿಕೆ ಮೂಲಕ ತರಬೇತಿಯಲ್ಲಿ ತಿಳಿವಳಿಕೆ ನೀಡಲಾಗುತ್ತದೆ.