ಅಮಾವಾಸ್ಯೆ’ ಎಂದರೆ ‘ಅಮಾಯಾಂ ವಸತಃ’. ಸೂರ್ಯ ಚಂದ್ರರು ಒಂದೇ ಮನೆಯಲ್ಲಿರುವುದು (ಸರಳ ರೇಖೆಯಲ್ಲಿ) ಎಂದರ್ಥ. ಭಾದ್ರಪದ ಮಾಸದ ಅಮಾವಾಸ್ಯೆ ವಿಶೇಷವಾದದ್ದು. ಆದ್ದ ರಿಂದ ಇದನ್ನು ‘ಮಹಾಲಯ ಅಮಾವಾಸ್ಯೆ’ ಎಂದು ಕರೆದರು.
ಈ ಅಮಾವಾಸ್ಯೆ ಪಿತೃಪಕ್ಷದ ಕೊನೆಯ ದಿನ ಬರುತ್ತದೆ. ಇದು ಗತಿಸಿದ ಹಿರಿಯರನ್ನು ನೆನೆದು ಅವರಿಗೆ ತರ್ಪಣ, ಎಡೆ ಹಾಗೂ ಶ್ರಾದ್ಧಗಳನ್ನು ಮಾಡುವ ದಿನ. ಶ್ರಾದ್ಧ ಪದವು ‘ಶ್ರದ್ಧಾ’ ಪದ ದಿಂದ ಬಂದಿದೆ. ಇದರಲ್ಲಿ ಪಾರ್ವಣ, ಆಮಾ, ಸಂಕಲ್ಪ ಹಾಗೂ ಹಿರಣ್ಯ ಎಂಬ ನಾಲ್ಕು ವಿಧ. ಮಾನವ ಲೋಕದ ಒಂದು ವರ್ಷದ ಅವಧಿಯು ಪಿತೃಲೋಕದ ಒಂದು ದಿನಕ್ಕೆ ಸಮ ಎಂದು ಶಾಸ್ತ್ರ ಹೇಳುತ್ತದೆ.
ದೈವಾರಾಧನೆ ಮರೆತರೂ ಶ್ರಾದ್ಧ ಕಾರ್ಯವನ್ನು ಮರೆಯ ಬಾರದು ಎನ್ನುತ್ತದೆ ಶಾಸ್ತ್ರ. ಏಕೆಂದರೆ ದೇವತೆಗಳಿಗೆ ಹವಿಸ್ಸನ್ನು ಯಜ್ಞ, ಯಾಗ ಹಾಗೂ ಹೋಮಗಳಿಂದ ನೀಡುತ್ತೇವೆ. ಅದೇ ರೀತಿ ಪಿತೃ ದೇವತೆಗಳಿಗೆ ಎಳ್ಳಿನಿಂದ ತರ್ಪಣ ನೀಡುತ್ತೇವೆ ಹಾಗೂ ಅವರಿಗೆ ಇಷ್ಟವಾದ ಪದಾರ್ಥವನ್ನು ಎಡೆ ಇಡುತ್ತೇವೆ. ಸ್ಥೂಲ ಶರೀರದಲ್ಲಿ ನಮ್ಮ ಕಣ್ಣ ಮುಂದೆ ಇಲ್ಲದಿದ್ದರೂ ಸೂಕ್ಷ್ಮ ಶರೀರದಿಂದ ಪರೋಕ್ಷವಾಗಿ ನಾವು ಮಾಡುವ ಶ್ರಾದ್ಧಕರ್ಮವನ್ನು ಅವರು ವೀಕ್ಷಿಸುತ್ತಾರೆ. ಇವರ ಆಶೀರ್ವಾದದಿಂದ ನಮಗೆ ವಿವಾಹ, ಸಂತಾನ, ಸುಖ ಹಾಗೂ ಧನಲಾಭವುಂಟಾಗುತ್ತದೆ.
ಶ್ರಾದ್ಧಗಳಲ್ಲಿ ಮೂರು ವಿಧ: ಮತ್ಸ್ಯ ಪುರಾಣದ ಪ್ರಕಾರ ಶ್ರಾದ್ಧಗಳಲ್ಲಿ ಮೂರು ವಿಧ. ಅವು ಯಾವುವು ಎಂದರೆ- ನಿತ್ಯ ಶ್ರಾದ್ಧ, ನೈಮಿತ್ತಿಕ ಶ್ರಾದ್ಧ, ಕಾಮ್ಯ ಶ್ರಾದ್ಧ. ನಿತ್ಯ ಶ್ರಾದ್ಧ ಎಂದರೆ- ಪ್ರತಿದಿನವೂ ಪಿತೃಗಳಿಗೆ ಜಲ (ನೀರು) ಅಥವಾ ಎಳ್ಳುಸಹಿತ ನೀರಿನೊಂದಿಗೆ ತರ್ಪಣ ನೀಡುವುದು. ನೈಮಿತ್ತಿಕ ಶ್ರಾದ್ಧ ಎಂದರೆ- ಒಂದು ಉದ್ದೇಶದಿಂದ ಸರಿಯಾದ ಸಮಯದಲ್ಲಿ ನಡೆಸುವ ಶ್ರಾದ್ಧ. ಒಂದು ನಿರ್ದಿಷ್ಟ ದಿನದಂದು ಅಂದರೆ ತಿಥಿ, ನಕ್ಷತ್ರ ಸಮಯವನ್ನು ಅನುಸರಿಸಿ ನಡೆಸುವುದೇ ಕಾಮ್ಯಶ್ರಾದ್ಧ.
ಯಾವ ದಿನ ಶ್ರಾದ್ಧ ಮಾಡಿದರೆ ಯಾವ ಫಲ?: ಶ್ರಾದ್ಧವನ್ನು ಕೃಷ್ಣಪಕ್ಷದಲ್ಲಾಗಲೀ ಶುಕ್ಷಪಕ್ಷದಲ್ಲಾಗಲೀ ಆಚರಿಸಿದರೆ ಆಯಾಯ ತಿಥಿ ದಿನಗಳಿಗೆ ಅನುಸಾರವಾಗಿ ಫಲ ಸಿಗುವುದು. ಪಾಡ್ಯದಿನದಂದು ಶ್ರಾದ್ಧ ಮಾಡಿದರೆ ಆರೋಗ್ಯವಂತ ಪುತ್ರ ಜನನ. ಬಿದಿಗೆ ದಿನ ಉತ್ತಮ ಪುತ್ರಿ ಜನನ, ತದಿಗೆ ದಿನ ಕೀರ್ತಿಲಾಭ, ಚತುರ್ಥಿ ದಿನ ವಾಹನ ಸೌಕರ್ಯ, ಪಂಚಮಿ ದಿನ ಧನಲಾಭ, ಷಷ್ಠಿದಿನ ವ್ಯಾಪಾರದಲ್ಲಿ ಲಾಭ, ಸಪ್ತಮಿ ದಿನ ಭೂಮಿ ಲಾಭ, ಅಷ್ಟಮಿ ದಿನ ವ್ಯಾಪಾರದಲ್ಲಿ ಲಾಭ, ನವಮಿ ಸಂತಾನ ಲಾಭ, ದಶಮಿ ದಿನ ಕೃಷಿಯಲ್ಲಿ ಲಾಭ, ಏಕಾದಶಿ ವಸ್ತ್ರಲಾಭ, ದ್ವಾದಶಿ ಬಂಗಾರ ಲಾಭ, ತ್ರಯೋದಶಿ ಸನ್ಮಾನ ಗೌರವ, ಚತುರ್ದಶಿ ದಿನ ನಿವೇಶನ ಭಾಗ್ಯ, ಅಮಾವಾಸ್ಯೆ ಅಥವಾ ಹುಣ್ಣಿಮೆ ದಿನ ಮೋಕ್ಷಪ್ರಾಪ್ತಿ. ಮಹಾಲಯ ಅಮಾವಾಸ್ಯೆ ಆಚರಣೆಯು ವೇದ-ಪುರಾಣ, ಇತಿಹಾಸ ಕಾಲದಿಂದಲೂ ಇದೆ. ತಂದೆ, ತಾಯಿಯ ಋಣವನ್ನು ತೀರಿಸಲು ಮಹಾಲಯ ಅಮಾವಾಸ್ಯೆ ದಿನ ಶ್ರಾದ್ಧ ಮಾಡಬೇಕು. ಮನುಷ್ಯ ಯಾವುದೇ ಪಾಪವನ್ನು ಮಾಡಿದರೂ ಪ್ರಾಯಶ್ಚಿತ್ತ ಇದೆ. ಆದರೆ ಪಿತೃಗಳಿಗೆ ತೊಂದರೆ ಕೊಟ್ಟರೆ ಅವರ ಶಾಪ ನಿರಂತರವಾಗಿ ಕಾಡುತ್ತದೆ.
ಪಿತೃಕಾರ್ಯ ಬಿಟ್ಟರೆ ಏನು ಆಗುವುದು?: ಶಾಂಡಿಲ್ಯ ಮಹರ್ಷಿ ಮಹಾನ್ ದೈವಭಕ್ತ. ಈತ ಲೋಕ ಕಲ್ಯಾಣದ ಸಲುವಾಗಿ ನಿರಂತರ ತಪಸ್ಸು ಮಾಡುತ್ತಿದ್ದ. ನಿರಂತರವಾಗಿ ಅಗ್ನಿದೇವನ ಆರಾಧನೆ, ಇಂದ್ರಪೂಜೆಯನ್ನು ಮಾಡಿದನು. ನೂರಾರು ವರ್ಷಗಳ ಕಾಲ ಮಾಡಿದರೂ ಅಗ್ನಿ ಮತ್ತು ಇಂದ್ರರು ಪ್ರತ್ಯಕ್ಷವಾಗಲಿಲ್ಲ. ಏಕೆಂದು ಚಿಂತಿಸುತ್ತಿದ್ದಾಗ ನಾರದರು ಕಾರಣ ವಿವರಿಸಿದರು. ನೀನು ನಿನ್ನ ಪಿತೃಕಾರ್ಯ ಬಿಟ್ಟಿರುವುದೇ ಇದಕ್ಕೆ ಕಾರಣ. ಆದ್ದರಿಂದ ಮಹಾಲಯ ಅಮಾವಾಸ್ಯೆ ದಿನ ನಿನ್ನ ಪಿತೃಕಾರ್ಯ ಮಾಡು ಎಂದರು. ಅದರಂತೆ ಶಾಂಡಿಲ್ಯ ಮುನಿ ಪಿತೃಕಾರ್ಯ ಮಾಡಿದನು. ಇದರಿಂದ ಸಂತುಷ್ಟರಾದ ಪಿತೃದೇವತೆಗಳು ಹರಸಿದರು. ನಂತರ ಇಂದ್ರ ಹಾಗೂ ಅಗ್ನಿ ಪ್ರತ್ಯಕ್ಷರಾದರು. ಪಿತೃಗಳ ಕಾರ್ಯ ಮಾಡಲು ಅಶಕ್ತನಾಗಿದ್ದರೆ ಆ ದಿನ ನದಿ ಅಥವಾ ಕೆರೆ ಹತ್ತಿರ ಹೋಗಿ ನೀರು ಹಾಗೂ ಎಳ್ಳಿನಿಂದ ತರ್ಪಣವನ್ನು ಕೊಡಬೇಕು ಎಂದು ಗರುಡ ಪುರಾಣದಲ್ಲಿ ತಿಳಿಸಿದೆ.
(ಲೇಖಕರು ಆಧ್ಯಾತ್ಮ ಚಿಂತಕ, ಹವ್ಯಾಸಿ ಬರಹಗಾರ)
| ಮಂಡಗದ್ದೆ ಪ್ರಕಾಶ್ಬಾಬು ಕೆ.ಆರ್.
(ಲೇಖಕರು ಆಧ್ಯಾತ್ಮ ಚಿಂತಕ, ಹವ್ಯಾಸಿ ಬರಹಗಾರ)