ಬೆಂಗಳೂರು: ಸಿಸಿಬಿ ಪೊಲೀಸರು ಎರಡು ಕಾರ್ಯಾಚರಣೆ ನಡೆಸಿದ್ದು, ಮೊತ್ತೊಂದು ಡ್ರಗ್ಸ್ ದಂಧೆ ಜಾಲವನ್ನು ಪತ್ತೆ ಮಾಡಿದ್ದಾರೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಮಿಷನರ್ ಕಮಲ್ ಪಂತ್, ಸಿಸಿಬಿ ಪೊಲೀಸರು ಕೆ.ಆರ್.ಪುರಂ ವ್ಯಾಪ್ತಿಯಲ್ಲಿ ಮತ್ತೊಂದು ಡ್ರಗ್ಸ್ ಜಾಲದ ಮೇಲೆ ದಾಳಿ ಮಾಡಿದ್ದಾರೆ. ಕಾರ್ಯಾಚರಣೆ ವೇಳೆ 2 ಕೆಜಿ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಇದರ ಬೆಲೆ 20 ಲಕ್ಷಕ್ಕೂ ಅಧಿಕ ಬೆಲೆ ಇರಬಹುದು ಎಂದರು.
ನಮಗೆ ಇರುವ ಮಾಹಿತಿಯ ಪ್ರಕಾರ ಡ್ರಗ್ಸ್ ಕಾಲೇಜುಗಳಲ್ಲೂ ಕಂಡು ಬರುತ್ತಿದೆ. ಇದರಲ್ಲಿ ಭಾಗಿಯಾಗಿದ್ದ ಮೂವರನ್ನು ಬಂಧಿಸಲಾಗಿದೆ. ಮೂವರನ್ನು ಕೇಳರ ಮೂಲದವರು ಎಂದು ಗುರುತಿಸಲಾಗಿದೆ. ಲಂಡನ್‍ನಲ್ಲಿ ಓದಿ ಬಂದಿದ್ದ ಯುವಕ ಡ್ರಗ್ಸ್ ದಂಧೆ ಮಾಡುತ್ತಿದ್ದನು. ಮನೆಯೊಂದರ ಮೇಲೆ ದಾಳಿ ನಡೆಸಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಕಮಿಷನರ್ ಹೇಳಿದರು.
ಕಾಲೇಜು, ಶಾಲೆಗಳಲ್ಲಿ ಡ್ರಗ್ಸ್ ಸೇವನೆ ಮಾಡುತ್ತಿರುವ ಬಗ್ಗೆ ದೂರು ಕೇಳಿ ಬರುತ್ತಿವೆ. ಹೀಗಾಗಿ ಕಾಲೇಜು, ಶಾಲಾ ಆಡಳಿತ ಮಂಡಳಿ ನಮಗೆ ಸಹಕರಿಸಬೇಕು. ಡ್ರಗ್ಸ್ ದಂಧೆಯನ್ನು ಕಡಿವಾಣ ಹಾಕಲು ಪ್ರಯತ್ನ ಮಾಡುತ್ತಿದ್ದೇವೆ. ಆಡಳಿತ ಮಂಡಳಿ ನಮ್ಮ ಜೊತೆ ಕೈ ಜೋಡಿಸಬೇಕು. ಯುವಕರು ಬೇರೆ ದೇಶದಿಂದ ಬಂದು ಡ್ರಗ್ಸ್ ಕೊಡುತ್ತಾರ ಅಥವಾ ಒಳಗಿನವರೇ ಕೊಡುತ್ತಾರ ಎಂಬ ಮಾಹಿತಿ ಗೊತ್ತಾದರೆ ಕೂಡಲೇ ನಮ್ಮ ಬಳಿ ಮಾಹಿತಿಯನ್ನು ಶೇರ್ ಮಾಡಿಕೊಳ್ಳಬೇಕು ಎಂದು ಕಮಲ್ ಪಂತ್ ಮನವಿ ಮಾಡಿಕೊಂಡರು.