ಬೆಂಗಳೂರು/ಮೈಸೂರು: ಕೊರೊನಾ ವಾರಿಯರ್ ಆಗಿದ್ದ ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಆತ್ಮಹತ್ಯೆ ಬಳಿಕ ಎಚ್ಚೆತ್ತಿರುವ ರಾಜ್ಯ ಸರ್ಕಾರ ಸದ್ಯ ಡ್ಯಾಮೇಜ್ ಕಂಟ್ರೋಲ್‍ಗೆ ಮುಂದಾಗಿದೆ. ಕೋವಿಡ್ ವಾರಿಯರ್ಸ್ ಮೇಲಿನ ಒತ್ತಡ ನಿವಾರಣೆಗೆ ಸರ್ಕಾರ ದೂರು ಪೆಟ್ಟಿಗೆ ವ್ಯವಸ್ಥೆ ಏರ್ಪಡಿಸುವ ಚಿಂತನೆಯಲ್ಲಿದೆ.
ಕೊರೊನಾ ವಾರಿಯರ್ಸ್ ಮೇಲಿನ ಒತ್ತಡ ನಿವಾರಣೆಗೆ ಸರ್ಕಾರದ ಕಂಪ್ಲೆಂಟ್ ಬಾಕ್ಸ್ ವ್ಯವಸ್ಥೆ ಮಾಡುವ ಕುರಿತು ಚರ್ಚೆ ನಡೆಸುತ್ತಿದೆ. ಕೊರೊನಾ ಸೇವೆ ನಿರ್ವಹಿಸುತ್ತಿರುವ ಇಲಾಖೆ, ಕಚೇರಿ, ಆಸ್ಪತ್ರೆಗಳಲ್ಲಿ ಪ್ರತ್ಯೇಕ ದೂರು ಪೆಟ್ಟಿಗೆ ಏರ್ಪಡಿಸಿ ಆ ಮೂಲಕ ಸಿಬ್ಬಂದಿಗೆ ಅನಗತ್ಯವಾಗಿ ಹೆಚ್ಚಿನ ಒತ್ತಡ ಹಾಕುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಲು ಮುಂದಾಗಿದೆ.
ಹೇಗೆ ಕೆಲಸ ಮಾಡಲಿವೆ?
ಕೊರೊನಾ ಸೇವೆಯಲ್ಲಿರುವ ಸಿಬ್ಬಂದಿ ಮೇಲೆ ಯಾರಾದರೂ ಒತ್ತಡ, ಹಿಂಸೆ, ಅಕ್ರಮ, ಲೋಪ, ಕಂಡುಬಂದಲ್ಲಿ ದೂರು ಪೆಟ್ಟಿಗೆ ಪತ್ರ ಬರೆದು ಹಾಕಬಹುದು. ದೂರು ನೀಡುವ ವೇಳೆ ಯಾಕೆ? ಯಾವ ವಿಭಾಗ ಎಂಬ ವಿವರ ನೀಡಬೇಕಿದೆ. ಆದರೆ ದೂರು ಕೊಡುವವರು ತಮ್ಮ ಹೆಸರು ಹೇಳುವ ಅಗತ್ಯವಿರುವುದಿಲ್ಲ. ದೂರು ಬಾಕ್ಸ್ ನಲ್ಲಿ ಬರೆದು ಹಾಕಲು ಇಷ್ಟವಿಲ್ಲದಿದ್ದರೆ ಮೇಲ್ ಮೂಲಕವೂ ದೂರು ಸಲ್ಲಿಸಬಹುದಾಗಿದೆ
ದೂರು ಪೆಟ್ಟಿಗೆ ಮೂಲಕ ಬಂದ ದೂರುಗಳ ಪರಿಶೀಲನೆಗೆ ಇಲಾಖಾವಾರು ಅಧಿಕಾರಿಗಳ ಕಮಿಟಿ ರಚನೆ ಮಾಡಿ, ಸಮಿತಿ ಪರಿಶೀಲನೆ ಬಳಿಕ ದೂರಿನಲ್ಲಿ ಸತ್ಯಾಂಶ ಇದ್ದರೆ ಸರ್ಕಾರದ ಗಮನಕ್ಕೆ ತರಬಹುದಾಗಿದೆ. ಆ ಬಳಿಕ ಸರ್ಕಾರದ ಮಟ್ಟದಲ್ಲಿ ಕ್ರಮ ಜರುಗಿಸಿಲು ಚಿಂತನೆ ನಡೆಸಲಾಗುತ್ತದೆ. ಆದರೆ ದೂರು ಪೆಟ್ಟಿಗೆ ದುರ್ಬಳಕೆ ಮಾಡಿಕೊಂಡರೆ ಅಂಥವರ ವಿರುದ್ಧವೂ ಕ್ರಮದ ಎಚ್ಚರಿಕೆ ನೀಡಲಾಗಿದೆ.
ಹೊಸ ಸಂಕಷ್ಟ?
ಇತ್ತ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ವೈದ್ಯಾಧಿಕಾರಿಗಳಿಗೆ ‘ಟಾರ್ಗೆಟ್’ ಕೊಟ್ಟ ಸರ್ಕಾರಕ್ಕೆ ಇದೀಗ ವೈದ್ಯರ ಸಂಘ ಹೊಸ ನಿಬಂಧನೆಗಳನ್ನು ಹಾಕಿದೆ. ಮಾರ್ಕೆಟ್, ಬಸ್ ಸ್ಟಾಂಡ್, ಆಟೋ ಸ್ಟಾಂಡ್ ಹಾಗೂ ಗಣೇಶ ಪೆಂಡಾಲ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೂ ಕೊರೊನಾ ಟೆಸ್ಟ್ ಮಾಡಲ್ಲ. ಸೋಂಕಿತರ ಮನೆ ಬಳಿ ತೆರಳಿ ಬೇಕಿದ್ದರೆ ಟೆಸ್ಟ್ ಮಾಡುತ್ತೇವೆ ಎಂದು ವೈದ್ಯರ ಸಂಘ ಸ್ಪಷ್ಟಪಡಿಸಿದೆ. ವೈದ್ಯರ ಈ ಷರತ್ತಿನಿಂದ ಸರ್ಕಾರ ಸದ್ಯ ಇಕ್ಕಟ್ಟಿಗೆ ಸಿಲುಕಿದೆ.
ಸದ್ಯ ಬೆಂಗಳೂರಿನಲ್ಲಿ ಕೊರೊನಾ ಸ್ಫೋಟ ನಿಯಂತ್ರಣಕ್ಕೆ ಬರುತ್ತಿಲ್ಲ. ಪರಿಣಾಮ ಕೊರೊನಾ ಟೆಸ್ಟಿಂಗ್ ಹೆಚ್ಚು ಮಾಡದಿದ್ದರೆ ಅಪಾಯ ಖಚಿತ ಎಂದು ಹೇಳಬಹುದಾಗಿದೆ. ಮಾರ್ಕೆಟ್, ಬಸ್ ನಿಲ್ದಾಣದಂತಹ ಸಾರ್ವಜನಿಕ ಸ್ಥಳಗಳಲ್ಲಿ ಟೆಸ್ಟ್ ಮಾಡಿದ್ದಕ್ಕೆ ಕೇಸ್ ಸಂಖ್ಯೆ ಹೆಚ್ಚಳವಾಗುತ್ತದೆ. ಆದರೆ, ಈಗ ಸಾರ್ವಜನಿಕ ಸ್ಥಳಗಳಲ್ಲಿ ಟೆಸ್ಟಿಂಗ್ ಮಾಡಲ್ಲ ಎಂದು ವೈದ್ಯರು ಹೊಸ ಷರತ್ತು ವಿಧಿಸಿದ್ದು, ಟೆಸ್ಟ್ ಮಾಡದಿದ್ದರೆ ಟೆಸ್ಟಿಂಗ್ ರೇಟ್ ಕಡಿಮೆ ಆಗುತ್ತದೆ. ಈ ಬೆಳವಣಿಗೆಯಿಂದ ಕೊರೊನಾ ಅಪಾಯ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಮೊದಲು ದಿನಕ್ಕೆ ಕೇವಲ 5 ಸಾವಿರ ಟೆಸ್ಟ್ ನಡೆಯುತ್ತಿತ್ತು. ಆದರೆ ಈಗ 25 ಸಾವಿರ ಟೆಸ್ಟ್ ಮಾಡುತ್ತಿದ್ದು, ಟೆಸ್ಟಿಂಗ್ ಸಂಖ್ಯೆ ಮತ್ತೆ ಐದು ಸಾವಿರಕ್ಕೆ ಬಂದು ನಿಂತರೆ ಅಪಾಯಕ್ಕೆ ಆಹ್ವಾನ ನೀಡಿದಂತೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.