ಬೆಳಗಾವಿ: ಸಂಗೊಳ್ಳಿ ರಾಯಣ್ಣ ಸೊಸೈಟಿ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. ಸಿಐಡಿ ಡಿವೈಎಸ್ಪಿ ಕೆ.ಪುರುಷೋತ್ತಮ ನೇತೃತ್ವದ ತಂಡ ಸುಮಾರು 2,063 ಪುಟಗಳ ದೋಷಾರೋಪ ಪಟ್ಟಿಯನ್ನು ಬೆಳಗಾವಿ ಪ್ರಧಾನ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದೆ.
ಚಲನಚಿತ್ರ ನಿರ್ದೇಶಕ ಆನಂದ ಅಪ್ಪುಗೋಳ್ ನೇತೃತ್ವದ ಸಂಗೊಳ್ಳಿ ರಾಯಣ್ಣ ಸೊಸೈಟಿ, ಬೆಳಗಾವಿ ಹಾಗೂ ವಿಜಯಪುರ ಜಿಲ್ಲೆಯಲ್ಲಿ 35 ಶಾಖೆಗಳನ್ನು ಹೊಂದಿದ್ದು, 26 ಸಾವಿರ ಗ್ರಾಹಕರಿಂದ ₹281.14 ಕೋಟಿ ಠೇವಣಿ ಸಂಗ್ರಹಿಸಿತ್ತು. ಆದರೆ ಠೇವಣಿದಾರರಿಗೆ ಬಡ್ಡಿ, ಅಸಲು ಪಾವತಿಸದೇ ಸ್ವಂತಕ್ಕೆ ಬಳಕೆ ಮಾಡಿರುವ ಆರೋಪ ಕೇಳಿಬಂದಿತ್ತು. ಈ ಕುರಿತು 2017ರ ಸೆಪ್ಟೆಂಬರ್ 1ರಂದು ಖಡೇಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸದ್ಯ ಕೋರ್ಟ್ಗೆ ದೋಷಾರೋಪ ಪಟ್ಟಿ ಸಲ್ಲಿಸಿರುವ ತನಿಖಾಧಿಕಾರಿಗಳು ಸೊಸೈಟಿಯಿಂದ ₹275 ಕೋಟಿ ದುರುಪಯೋಗವಾಗಿದ್ದು, ದುರ್ಬಳಕೆ ಹಣದಿಂದ ಸೊಸೈಟಿ ಅಧ್ಯಕ್ಷ, ನಿರ್ದೇಶಕರ ಹೆಸರಿನಲ್ಲಿ ಆಸ್ತಿ ಖರೀದಿ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಅಲ್ಲದೇ ತನಿಖೆ ಮುಂದುವರೆಸಿರುವ ಕುರಿತು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.