ಚೆನ್ನೈ: ಗಾಯಕ ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರು ಡೇಂಜರ್ ಝೋನ್ ನಿಂದ ಪಾರಾಗಿದ್ದು, ಖುಷಿ ತಂದಿದೆ ಎಂದು ನಟ ರಜನಿಕಾಂತ್ ತಿಳಿಸಿದ್ದಾರೆ.ಈ ಸಂಬಂಧ ವಿಡಿಯೋ ಮಾಡಿ ಎಸ್‍ಪಿಬಿ ಆರೋಗ್ಯದ ಬಗ್ಗೆ ಮಾಹಿತಿ ನೀಡಿರುವ ತಲೈವಾ, ಈ ತಿಂಗಳ ಮೊದಲ ವಾರದಲ್ಲಿ ಕೊರೊನಾ ಪಾಸಿಟಿವ್ ಬಂದು ಆಸ್ಪತ್ರೆಗೆ ದಾಖಲಾಗಿರುವ 71 ವರ್ಷದ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ಸದ್ಯ ಡೇಂಜರ್ ಝೋನ್ ನಿಂದ ಪಾರಾಗಿದ್ದಾರೆ ಎಂದು ಹೇಳಿದ್ದಾರೆ.
ಎಸ್‍ಪಿ ಅವರು ಅಪಾಯದಿಂದ ಪಾರಾಗಿದ್ದಾರೆ. ಅವರ ಶೀಘ್ರ ಚೇರಿಕೆಗಾಗಿ ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ. ಎಸ್‍ಪಿಬಿ ಅವರು ಕಳೆದ 50 ವರ್ಷಗಳಿಂದ ಹಲವು ಭಾರತೀಯ ಭಾಷೆಗಳಲ್ಲಿ ಹಾಡುಗಳನ್ನು ಹಾಡುವ ಮೂಲಕ ಜನರ ಮನ ಗೆದ್ದಿದ್ದಾರೆ. ತಮ್ಮ ಸುಮಧುರ ಕಂಠದಿಂದ ಕೋಟ್ಯಂತರ ಜನರ ಮೊಗದಲ್ಲಿ ಖುಷಿ ತಂದಿದ್ದಾರೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಶುಕ್ರವಾರವಷ್ಟೇ ಎಸ್‍ಪಿಬಿ ಆರೋಗ್ಯದಲ್ಲಿ ಭಾರೀ ಏರುಪೇರು ಕಂಡಿದ್ದು, ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದರು. ನಂತರ ಭಾನುವಾರ ಎಸ್‍ಪಿಬಿ ಪುತ್ರ ಎಸ್‍ಪಿ ಚರಣ್ ತಂದೆಯ ಆರೋಗ್ಯದ ಬಗ್ಗೆ ಟ್ವೀಟ್ ಮಾಡಿ, ತಂದೆಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಸದ್ಯ ಅವರು ವೆಂಟಿಲೇಟರ್ ಸಹಾಯವಿಲ್ಲದೆ ಉಸಿರಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಆಗಸ್ಟ್ 5ರಂದು ಎಸ್‍ಪಿ ಅವರಿಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ಶುಕ್ರವಾರ ಸಂಜೆ ಐಸಿಯುಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಸದ್ಯ ಇದೀಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ.