ಪಟಾಕಿ ವ್ಯಾಪಾರ ಮಂಗಳವಾರದಿಂದ ಗರಿಗೆದರಿದೆ. ಆದರೆ, ಪಟಾಕಿ ಮಾರಾಟಕ್ಕೆ ಕೆಲವೇ ದಿನಗಳಷ್ಟೇ ಅವಕಾಶ ನೀಡಿರುವುದರಿಂದ ಪಟಾಕಿ ವ್ಯಾಪಾರಿಗಳು ತಳಮಳ ಅನುಭವಿಸುತ್ತಿದ್ದಾರೆ.
ಕಳೆದ ದೀಪಾವಳಿ ಸಮಯದಲ್ಲಿ ಕೋವಿಡ್ ನಿರ್ಬಂಧವಿತ್ತು.
ಪಟಾಕಿ ಮಾರಾಟದ ಮೇಲೂ ಸರ್ಕಾರಗಳು ನಿರ್ಬಂಧ ವಿಧಿಸಿ, ‘ಹಸಿರು ಪಟಾಕಿ’ಗೆ ಮಾತ್ರ ಅನುಮತಿ ನೀಡಿದ್ದರಿಂದ ಮಾರಾಟಗಾರರು ಸಂಕಷ್ಟ ಅನುಭವಿಸಿದ್ದರು.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಈ ಬಾರಿಯೂ ‘ಹಸಿರು ಪಟಾಕಿ’ಗಳನ್ನು ಬಿಟ್ಟು ಉಳಿದ ಯಾವುದೇ ಇತರ ಅಪಾಯಕಾರಿ ಹಾಗೂ ಮಾಲಿನ್ಯ ಉಂಟು ಮಾಡುವ ಪಟಾಕಿಗಳನ್ನು ಮಾರಾಟ ಮಾಡುವುದು ಹಾಗೂ ಹಚ್ಚುವುದು ನಿಷಿದ್ಧ’ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಬಾರಿ ನಿರ್ಬಂಧಗಳು ಕೊಂಚ ಸಡಿಲಗೊಂಡಿರುವುದರಿಂದ ನಗರದ ವಿವಿಧ ವಾರ್ಡ್‌ನ ಮೈದಾನಗಳಲ್ಲಿ ಮಂಗಳವಾರದಿಂದಲೇ ಪಟಾಕಿ ಮಳಿಗೆಗಳು ತಲೆ ಎತ್ತಿವೆ. ಆದರೆ, ‘ಕೇವಲ ಮೂರೇ ದಿನ ವ್ಯಾಪಾರಕ್ಕೆ ಅನುಮತಿ ನೀಡಲಾಗಿದ್ದು, ಈ ಅವಧಿಗೆ ವ್ಯಾಪಾರ ನಡೆಸಿದರೂ ನಮಗೆ ಲಾಭ ದೂರದ ಮಾತು’ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
‘ಕೋವಿಡ್‌ಗೂ ಹಿಂದಿನ ವರ್ಷಗಳಲ್ಲಿ ಪಟಾಕಿ ವ್ಯಾಪಾರಕ್ಕೆ ಕನಿಷ್ಠ 6 ದಿನಗಳವರೆಗೆ ಅವಕಾಶ ಇರುತ್ತಿತ್ತು. ಹಬ್ಬದ ಆಸುಪಾಸಿನ ದಿನಗಳಲ್ಲಿ ಪಟಾಕಿ ವ್ಯಾಪಾರ ನೀರಸವಾಗಿರುತ್ತದೆ. ಬಹುತೇಕರು ಹಬ್ಬಕ್ಕೂ ಮುನ್ನ ಒಂದು ವಾರದಿಂದಲೇ ಪಟಾಕಿ ಖರೀದಿಸುತ್ತಾರೆ. ಈ ಬಾರಿ ನ.5ರವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಮೂರು ದಿನ ನಡೆಯುವ ವ್ಯಾಪಾರದಿಂದ ಲಾಭ ಕಾಣುವುದು ಅನುಮಾನ’ ಎಂದು ನಗರದ ಪಟಾಕಿ ವ್ಯಾಪಾರಿ ದಿನೇಶ್ ಅಳಲು ತೋಡಿಕೊಂಡರು.
‘ಪ್ರತಿ ವರ್ಷ ದೀಪಾವಳಿ ಸಮಯದಲ್ಲಿ ಪಟಾಕಿ ವ್ಯಾಪಾರಿಗಳಿಗೆ ತೊಡಕುಗಳು ಹೆಚ್ಚಾಗುತ್ತಿವೆ. ಮುಕ್ತವಾದ ವ್ಯಾಪಾರಕ್ಕೆ ಅನುವು ಮಾಡಿಕೊಟ್ಟರೆ ನಮಗೆ ಹಾಗೂ ಗ್ರಾಹಕರಿಗೂ ಅನುಕೂಲ. ಮುಂದಿನ ವರ್ಷವಾದರೂ ಪಟಾಕಿ ಮಾರಾಟದ ದಿನಗಳನ್ನು ವಿಸ್ತರಿಸಬೇಕು’ ಎಂದು ಮನವಿ ಮಾಡಿದರು.
ಮಲ್ಲೇಶ್ವರಕ್ಕೆ ಸಿಗದ ಅನುಮತಿ: ಈ ಬಾರಿ ಮಲ್ಲೇಶ್ವರದಲ್ಲಿ ಪಟಾಕಿ ಮಳಿಗೆಗಳನ್ನು ತೆರೆಯಲು ಪೊಲೀಸ್ ಇಲಾಖೆ ಅನುಮತಿ ನೀಡಿಲ್ಲ. ಇದರಿಂದ ಮಲ್ಲೇಶ್ವರದಲ್ಲಿ ಪ್ರತಿ ವರ್ಷ ಮಳಿಗೆಗಳನ್ನು ತೆರೆಯುತ್ತಿದ್ದ ಪಟಾಕಿ ವ್ಯಾಪಾರಿಗಳು ದಿಕ್ಕುತೋಚದ ಸ್ಥಿತಿಯಲ್ಲಿದ್ದಾರೆ.
‘ಪಟಾಕಿ ವ್ಯಾಪಾರಿಗಳು ಮಳಿಗೆ ತೆರೆಯುವ ಪರವಾನಗಿ ಪಡೆಯಲು ಆನ್‌ಲೈನ್ ವ್ಯವಸ್ಥೆ ಕಲ್ಪಿಸಿರುವುದು ಸ್ವಾಗತಾರ್ಹ. ಆದರೆ, ಈ ಪ್ರಕ್ರಿಯೆ ಪೂರೈಸಲು ತಡವಾಗಿದ್ದರಿಂದ ಮಲ್ಲೇಶ್ವರ ಭಾಗದ ಪಟಾಕಿ ವರ್ತಕರಿಗೆ ಈ ಬಾರಿ ಮಳಿಗೆ ತೆರೆಯಲು ಪೊಲೀಸ್ ಇಲಾಖೆ ಅನುಮತಿ ನೀಡಿಲ್ಲ. ಇದು ಖಂಡನೀಯ’ ಎಂದು ಬೆಂಗಳೂರು ಚಿಲ್ಲರೆ ಪಟಾಕಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಆರ್.ಚಂದ್ರಶೇಖರ್ ದೂರಿದರು.
‘ಆನ್‌ಲೈನ್ ಪ್ರಕ್ರಿಯೆ ನಮಗೂ ಹೊಸದಾಗಿದ್ದರಿಂದ ಅವರು ನೀಡಿದ ಗಡುವಿನಲ್ಲಿ ಅರ್ಜಿ ಸಲ್ಲಿಕೆ ಸಾಧ್ಯವಾಗಲಿಲ್ಲ. ಮಾರಾಟಗಾರರಿಗೆ ಕನಿಷ್ಠ ಬೇರೆ ಸ್ಥಳದಲ್ಲಾದರೂ ವ್ಯಾಪಾರಕ್ಕೆ ಅನುಮತಿ ನೀಡಬಹುದಿತ್ತು. ವ್ಯಾಪಾರಿಗಳು ವರ್ಷಪೂರ್ತಿ ಕಾದು, ಲಕ್ಷಾಂತರ ಬಂಡವಾಳದೊಂದಿಗೆ ಪಟಾಕಿ ತರಿಸಿಕೊಂಡಿದ್ದು, ಪರವಾನಗಿ ಸಿಗದಿರುವುದರಿಂದ ನಷ್ಟಕ್ಕೆ ಸಿಲುಕಿದ್ದಾರೆ. ವ್ಯಾಪಾರಕ್ಕೆ ಇಲಾಖೆ ಅನುಮತಿ ನೀಡಬೇಕು’ ಎಂದು ಒತ್ತಾಯಿಸಿದರು.
‘ಹಸಿರು ಪಟಾಕಿ’ ಪತ್ತೆ ಹೇಗೆ?
ಹಸಿರು ಪಟಾಕಿಗಳನ್ನು ಪತ್ತೆ ಹಚ್ಚಲು ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ಕಳೆದ ವರ್ಷ ಪ್ರಾಯೋಗಿಕವಾಗಿ ಜಾರಿ ಮಾಡಲಾಗಿತ್ತು. ಈ ಬಾರಿ ಮಾರುಕಟ್ಟೆಗೆ ಬಂದಿರುವ ಹಸಿರು ಪಟಾಕಿಗಳ ಮೇಲೆ ಭಾರತೀಯ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ, ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆಗಳು (ಸಿಎಸ್‌ಐಆರ್-ನೀರಿ) ಪ್ರಮಾಣಿಸಿರುವ ‘ಹಸಿರು ಮುದ್ರೆ’ ಹಾಗೂ ಕ್ವಿಕ್ ರೆಸ್ಪಾನ್ಸ್ (ಕ್ಯುಆರ್) ಕೋಡ್ ಇರಲಿದೆ. ಗ್ರಾಹಕರು ಇವುಗಳ ಸಹಾಯದಿಂದ ಹಸಿರು ಪಟಾಕಿಯನ್ನು ದೃಢಪಡಿಸಿಕೊಳ್ಳಬಹುದು.
ಪಟಾಕಿ ದರ-ಪೂರೈಕೆ ವೆಚ್ಚ ಏರಿಕೆ
‘ಡೀಸೆಲ್ ದರ ಏರಿಕೆಯು ಈ ಬಾರಿ ಪಟಾಕಿಗಳ ಸರಬರಾಜಿನ ಮೇಲೂ ಪರಿಣಾಮ ಬೀರಿದೆ. ಕ್ರಮೇಣ ಪಟಾಕಿಗಳ ದರವೂ ಕಳೆದ ಬಾರಿಗಿಂತ ಶೇ 20ರಷ್ಟು ಹೆಚ್ಚಾಗಿದೆ. ಜೊತೆಗೆ ಪಟಾಕಿ ಕಾರ್ಖಾನೆಗಳಿಂದ ಮಳಿಗೆಗಳಿಗೆ ಪಟಾಕಿ ತಲುಪಿಸುವ ವೆಚ್ಚವೂ ಏರಿಕೆಯಾಗಿದೆ. ಪಟಾಕಿ ವ್ಯಾಪಾರ ನಡೆಸುವುದು ಪ್ರತಿ ವರ್ಷ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ’ ಎಂದು ಪಟಾಕಿ ವ್ಯಾಪಾರಿ ಅರುಣ್ ಕುಮಾರ್ ಬೇಸರ ವ್ಯಕ್ತಪಡಿಸಿದರು.
ಪರವಾನಗಿಗೆ ಆನ್‌ಲೈನ್ ವ್ಯವಸ್ಥೆ: ಸ್ವಾಗತಾರ್ಹ
‘ಪಟಾಕಿ ವ್ಯಾಪಾರಿಗಳು ಪ್ರತಿ ವರ್ಷ ಮಳಿಗೆ ತೆರೆಯುವ ಪರವಾನಗಿ ಪಡೆಯಲು ವಿವಿಧ ಇಲಾಖೆಗಳಿಗೆ ಅಲೆದಾಡಬೇಕಿತ್ತು. ಆದರೆ, ಈ ವರ್ಷದಿಂದ ಆನ್‌ಲೈನ್ ಮೂಲಕವೇ ಪರವಾನಗಿ ಪಡೆದುಕೊಳ್ಳುವ ವ್ಯವಸ್ಥೆ ಮಾಡಿರುವುದು ಸ್ವಾಗತಾರ್ಹ. ‘ಸೇವಾ ಸಿಂಧು’ ಮೂಲಕ ಅರ್ಜಿ ಸಲ್ಲಿಸಿ ಸುಲಭವಾಗಿ ಪರವಾನಗಿ ಪಡೆದುಕೊಳ್ಳುವುದರಿಂದ ವ್ಯಾಪಾರಿಗಳ ಅಲೆದಾಟ ನಿಲ್ಲಲಿದೆ’ ಎಂದು ಸುವರ್ಣ ಕರ್ನಾಟಕ ಕ್ರ್ಯಾಕರ್ಸ್ ಅಸೋಸಿಯೇಷನ್‌ನ ಖಜಾಂಚಿ ಸಿ.ಮಂಜುನಾಥ್ ಹೇಳಿದರು.
ಪಟಾಕಿ ಮಳಿಗೆ ತೆರೆಯಲು ತಗುಲುವ ವೆಚ್ಚ
ಮುಂಗಡ ಠೇವಣಿ;₹25 ಸಾವಿರ
ಪರವಾನಗಿ ಶುಲ್ಕ;₹5 ಸಾವಿರ (ಪೊಲೀಸ್)
ಅಗ್ನಿಶಾಮಕ ದಳ;₹5 ಸಾವಿರ (ಎನ್‍ಒಸಿ)
ಬಾಡಿಗೆ;₹500ರಿಂದ ₹2 ಸಾವಿರ (ಒಂದು ದಿನಕ್ಕೆ)
ಅಂಕಿ ಅಂಶ
₹30 ಸಾವಿರ -ಒಂದು ಮಳಿಗೆ ನಿರ್ಮಾಣ-ನಿರ್ವಹಣೆ ವೆಚ್ಚ
₹50 ಕೋಟಿ -ಬೆಂಗಳೂರಿನ ವಾರ್ಷಿಕ ಪಟಾಕಿ ವಹಿವಾಟು (ಅಂದಾಜು)
500 -ಬೆಂಗಳೂರಿನಲ್ಲಿರುವ ಪಟಾಕಿ ವರ್ತಕರು.