Breaking News

ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಮಲಪ್ರಭಾ ನದಿ ತೀರದ ವಿವಿಧ ಗ್ರಾಮಗಳು ಮತ್ತು ಮುಂಜಾಗ್ರತಾ ಕ್ರಮವಾಗಿ ಆರಂಭಿಸಲಾಗಿರುವ ಪರಿಹಾರ(ಕಾಳಜಿ) ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

Spread the love

ಬೆಳಗಾವಿ: ನೆರೆಯ ಮಹಾರಾಷ್ಟ್ರ ಹಾಗೂ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ  ಹಿನ್ನೆಲೆಯಲ್ಲಿ ಪ್ರವಾಹ ಭೀತಿ ಎದುರಾಗಿದ್ದು,  ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಮಲಪ್ರಭಾ ನದಿ ತೀರದ ವಿವಿಧ ಗ್ರಾಮಗಳು ಮತ್ತು ಮುಂಜಾಗ್ರತಾ ಕ್ರಮವಾಗಿ ಆರಂಭಿಸಲಾಗಿರುವ ಪರಿಹಾರ(ಕಾಳಜಿ) ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಸವದತ್ತಿ ತಾಲ್ಲೂಕಿನ ನವೀಲುತೀರ್ಥ ಜಲಾಶಯಕ್ಕೆ  ಭೇಟಿ ನೀಡಿ ನೀರಿನ ಒಳ ಹರಿವು ಮತ್ತು ಹೊರ ಹರಿವು ಪ್ರಮಾಣದ ಮಾಹಿತಿಯನ್ನು ಪಡೆದುಕೊಂಡರು.

ಜಲಾಶಯದ ನೀರಿನ ಮಟ್ಟದ ಮೇಲೆ ನಿರಂತರವಾಗಿ ನಿಗಾ ವಹಿಸಬೇಕು. ನೀರು ಬಿಡುಗಡೆಗಿಂತ ಮುಂಚೆ ನದಿ ತೀರದ ಜನರಿಗೆ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿಯನ್ನು ಮುಂಚಿತವಾಗಿ ನೀಡಬೇಕು ಎಂದು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನವೀಲುತೀರ್ಥ ಜಲಾಶಯದ ಕಾರ್ಯನಿರ್ವಾಹಕ ಅಭಿಯಂತರ ಕೃಷ್ಣಾಜಿರಾವ್ ಉಪಸ್ಥಿತರಿದ್ದರು.

ಇದಕ್ಕೂ ಮುಂಚೆ ಬೈಲಹೊಂಗಲ ಪಟ್ಟಣದ ಕೆಲ ಪ್ರದೇಶಗಳನ್ನು ಸುತ್ತಾಡಿದ ಜಿಲ್ಲಾಧಿಕಾರಿಗಳು, ನೆರೆಹಾವಳಿಯಿಂದ ಉಂಟಾಗುವ ಸಮಸ್ಯೆಗಳ ಕುರಿತು ಪರಿಶೀಲನೆ ಕೈಗೊಂಡು,  ನಯಾನಗರ ಸೇತುವೆ ವೀಕ್ಷಿಸಿದರು.

ಪರಿಹಾರ ಕೇಂದ್ರಗಳಿಗೆ ಭೇಟಿ:   ಮಲಪ್ರಭಾ ನದಿ ತೀರದ ರಾಮದುರ್ಗ ತಾಲ್ಲೂಕಿನ ಹಿರೇ ಹಂಪಿಹೊಳಿ ಹಾಗೂ ಚಿಕ್ಕ ಹಂಪಿಹೊಳಿ ಗ್ರಾಮದ ಒಟ್ಟು 51 ಕುಟುಂಬಗಳನ್ನು ಮುಂಜಾಗ್ರತಾ ಕ್ರಮವಾಗಿ ಸುರೇಬಾನದ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿರುತ್ತದೆ.
    ಸುರೇಬಾನದ ಎಪಿಎಂಸಿ ಆವರಣದ ಕೇಂದ್ರದಲ್ಲಿ 12 ಕುಟುಂಬಗಳು ಮತ್ತು ಹೈಸ್ಕೂಲಿನಲ್ಲಿ ತೆರೆಯಲಾಗಿರುವ ಪರಿಹಾರ ಕೇಂದ್ರದಲ್ಲಿ 39 ಕುಟುಂಬಗಳಿಗೆ ಆಶ್ರಯ ಕಲ್ಪಿಸಲಾಗಿರುತ್ತದೆ.

 ಈ ಕುಟುಂಬಗಳಿಗೆ ಊಟೋಪಹಾರ ಸೇರಿದಂತೆ ಕೋವಿಡ್-19 ಹಿನ್ನೆಲೆಯಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

ಪರಿಹಾರ ಕೇಂದ್ರಗಳಲ್ಲಿ ಇರುವವರಿಗೆ ಮಾಸ್ಕ್, ಸ್ಯಾನಿಟೈಸರ್, ಪಲ್ಸ್ ಆಕ್ಸಿಮೀಟರ್ ಮತ್ತಿತರ ಅಗತ್ಯ ಉಪಕರಣ ನೀಡಲಾಗಿದ್ದು, ಪ್ರತಿ ಪರಿಹಾರ ಕೇಂದ್ರಕ್ಕೆ ವೈದ್ಯರ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಸೇರಿದಂತೆ ಐದು ಜನರ ಪ್ರತ್ಯೇಕ ತಂಡ ನಿಯೋಜಿಸಲಾಗಿದೆ ಎಂದು ಹೇಳಿದರು.

 ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರಾಮದುರ್ಗ ಶಾಸಕರಾದ ಮಹಾದೇವಪ್ಪ ಯಾದವಾಡ ಅವರು, ಪರಿಹಾರ ಕೇಂದ್ರಗಳಲ್ಲಿ ಆಸರೆ ಪಡೆದುಕೊಂಡಿರುವ ಕುಟುಂಬಗಳಿಗೆ ಯಾವುದೇ ರೀತಿಯ ಅನಾನುಕೂಲ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಮದುರ್ಗ ತಾಲ್ಲೂಕಿನ ಗೊನ್ನಾಗರದಲ್ಲಿನ ಪರಿಹಾರ ಕೇಂದ್ರಕ್ಕೂ ಭೇಟಿ ನೀಡಿದ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು, ಅಲ್ಲಿನ ಮೂಲಸೌಕರ್ಯಗಳನ್ನು ಪರಿಶೀಲಿಸಿದರು.   ಕೇಂದ್ರದಲ್ಲಿ 48 ಕುಟುಂಬಗಳ 200 ಕ್ಕೂ ಅಧಿಕ ಜನರು ಆಶ್ರಯ ಪಡೆದುಕೊಂಡಿದ್ದಾರೆ. ಪರಿಹಾರ ಕೇಂದ್ರದಲ್ಲಿನ ವ್ಯವಸ್ಥೆಯ ಕುರಿತು ಗ್ರಾಮಸ್ಥರಿಂದಲೂ ಮಾಹಿತಿಯನ್ನು ಪಡೆದುಕೊಂಡರು.

ಸದ್ಯಕ್ಕೆ ಪ್ರವಾಹ ಸ್ಥಿತಿ ಎದುರಾಗಿಲ್ಲ, ಆದರೂ ಮುಂಜಾಗ್ರತಾ ಕ್ರಮವಾಗಿ ನದಿತೀರದ ಕೆಲ ಗ್ರಾಮಗಳ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಬೈಲಹೊಂಗಲ ಎಸಿ ಶಿವಾನಂದ ಭಜಂತ್ರಿ ವಿವರಿಸಿದರು.

ಲೋಳಸೂರ ಸೇತುವೆ ಪರಿಶೀಲನೆ:   ಇದಾದ ಬಳಿಕ ಪ್ರವಾಹದಿಂದ ಬಾಧಿತಗೊಳ್ಳುವ ಗೋಕಾಕ ನಗರದ ಉಪ್ಪಾರ ಓಣಿ, ಕುಂಬಾರ ಗಲ್ಲಿ ಸೇರಿದಂತೆ ವಿವಿಧ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಹಿರೇಮಠ ಅವರು ಭೇಟಿ ನೀಡಿದರು.

ಕಳೆದ ವರ್ಷ ಗೋಕಾಕ ನಗರದ ಅನೇಕ ಬಡಾವಣೆಗಳಲ್ಲಿ ಪ್ರವಾಹದಿಂದ ಭಾರೀ ಹಾನಿಯಾಗಿತ್ತು. ಆದ್ದರಿಂದ ಈ ಬಾರಿ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ ಅವರಿಗೆ ನಿರ್ದೇಶನ ನೀಡಿದರು.

ಲೋಳಸೂರ ಸೇತುವೆಯನ್ನು ಕೂಡ ಖುದ್ದಾಗಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಾದ್ಯಂತ ಕಳೆದ ವಾರದಿಂದ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಸ್ಥಳೀಯ ಅಧಿಕಾರಿಗಳು ಜಾಗರೂಕತೆಯಿಂದ ಕೆಲಸ ಮಾಡಬೇಕು. ಜನರು, ಆಸ್ತಿಪಾಸ್ತಿಗಳ ರಕ್ಷಣೆ ಮತ್ತು ಜಾನುವಾರುಗಳ ರಕ್ಷಣೆಗೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಸೂಚನೆ ನೀಡಿದರು.

ಪ್ರವಾಹ ಸೇರಿದಂತೆ ಯಾವುದೇ ಬಗೆಯ ತುರ್ತು ಪರಿಸ್ಥಿತಿ ನಿರ್ವಹಣೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅಗತ್ಯವಿದ್ದರೆ ನದಿ ತೀರದ ಗ್ರಾಮಗಳ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗುವುದು ಎಂದು ಬೈಲಹೊಂಗಲ ಎಸಿ ಶಿವಾನಂದ ಭಜಂತ್ರಿ ತಿಳಿಸಿದರು.

  ಬೈಲಹೊಂಗಲ್, ರಾಮದುರ್ಗ, ಗೋಕಾಕ ತಾಲ್ಲೂಕುಗಳ ತಹಶೀಲ್ದಾರರು, ನೋಡಲ್ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Spread the love

About Laxminews 24x7

Check Also

ಪಕ್ಷವಿರೋಧಿ ಚಟುವಟಿಕೆ ನಡೆಸುತ್ತಿರುವ ವಿಜಯೇಂದ್ರ ವಿರುದ್ಧವೂ ನೋಟೀಸ್ ಜಾರಿಯಾಗಬೇಕು: ರಮೇಶ್ ಜಾರಕಿಹೊಳಿ

Spread the loveದೆಹಲಿ: ಪ್ರಸ್ತುತವಾಗಿ ನಾವು ವಕ್ಫ್ ವಿರುದ್ಧ ಮಾಡಿದ ಹೋರಾಟದ ವರದಿಯನ್ನು ಜೆಪಿಸಿಗೆ ನೀಡಲು ಬಂದಿದ್ದೇವೆ, ಮುಂದಿನ ಸಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ