Breaking News

ಏಳನೇ ಬಾರಿಗೆ ವಿಶ್ಚದಾಖಲೆ ಬರೆದ ಬಾಲಕಿ; ಗೋಲ್ಡನ್ ಗರ್ಲ್ ಕಿರೀಟ ಮುಡಿಗೇರಿಸಿ ಸಾಧನೆ!

Spread the love

ಉಡುಪಿ: ಈಕೆ 12 ವರ್ಷದ ಬಾಲಕಿ. ಈಕೆಯ ಸಾಧನೆ ಕಂಡು ಜಗತ್ತೆ ನಿಬ್ಬೆರಗಾಗಿದೆ. ಈಗಾಗಲೇ ಆರು ವಿಶ್ವದಾಖಲೆ ಮಾಡಿರುವ ಈಕೆಯ ಏಳನೆ ವಿಶ್ವದಾಖಲೆಯನ್ನ ಯಾರೂ ಮುರಿಯಲು ಅಸಾಧ್ಯವೆಂಬಂತೆ‌ ಸಾಧಿಸಿ ತೋರಿಸಿದ್ದಾಳೆ. ಸ್ವತಃ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಮುಖ್ಯಸ್ಥರೇ ಮೂಖವಿಸ್ಮಿತರಾಗಿ ಗೋಲ್ಡನ್ ಗರ್ಲ್ ಗರಿಯನ್ನ ಈಕೆ ಮುಡಿಗೇರಿಸಿದ್ದಾರೆ.

ಉಡುಪಿಯ ಯೋಗಸಾಧಕಿ, ಪುಟ್ಟ ಹೆಣ್ಣು ಮಗಳು ಜಗತ್ತೇ ಬೆರಗುಗಣ್ಣಿನಿಂದ ನೋಡುವಂತಹ ಸಾಧನೆ ಮಾಡಿದ್ದಾಳೆ. ದೇಹದೊಳಗೆ ಮೂಳೆಯೇ ಇಲ್ಲದವಳಂತೆ ಲೀಲಾಜಾಲವಾಗಿ ತಿರುಗುವ ಈಕೆ, ಅತೀ ಕಡಿಮೆ ಅವಧಿಯಲ್ಲಿ ಅತೀಹೆಚ್ಚು ಯೋಗಾಸನ ಭಂಗಿಗಳನ್ನು ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್ಸ್ ನಲ್ಲಿ ನಾ ಭೂತೋ ನಾ ಭವಿಷ್ಯತಿಃ ಎಂಬಂತೆ ಯಾರಿಗೂ ಈಕೆಯ ದಾಖಲೆ ಮುರಿಯದಂತೆ ರೆಕಾರ್ಡ್ ಮಾಡಿದ್ದಾಳೆ. ಹೌದು, ಗೋಲ್ಡನ್ ಬುಕ್‌ ಆಫ್‌ ರೆಕಾರ್ಡ್ ಮುಖ್ಯಸ್ಥರು ಒಂದು ಗಂಟೆಯ ಅವಧಿ ಕೊಟ್ಟು 200 ಯೋಗ ಭಂಗಿ ಪ್ರದರ್ಶಿಸುವ ಗುರಿ ನೀಡಿದ್ದರು. ಆದರೆ ಈಕೆ ಕೇವಲ 43 ನಿಮಿಷ 18ಸೆಕೆಂಡ್ ಅವಧಿಯಲ್ಲೇ 245 ಭಂಗಿ ಲೀಲಾಜಾಲವಾಗಿ ಪ್ರದರ್ಶಿಸಿ ಅಚ್ಚರಿ ಮೂಡಿಸಿದ್ದಾಳೆ.

ಈಕೆಯ ಹೆಸರು ತನುಶ್ರೀ ಪಿತ್ರೋಡಿ. ಈಗಿನ್ನೂ ಹನ್ನೆರಡರ ಹರೆಯ. ಅದೆಂಥ ಉತ್ಸಾಹ , ಅದೆಂಥಾ ಲವಲವಿಕೆ. ಉಡುಪಿಯ ಉದ್ಯಾವರ ಗ್ರಾಮದ ಪಿತ್ರೋಡಿಯ ಈ ಹೆಣ್ಣುಮಗು ಯೋಗವನ್ನೇ ಉಂಡು, ಉಟ್ಟು ಉಸಿರಾಡುವ ಪೋರಿ. ಅದಕ್ಕಾಗಿಯೇ ಈಕೆಯ ಮುಡಿಗಿದೆ ಆರು ವಿಶ್ವದಾಖಲೆಗಳ ಗರಿ. ಇದೀಗ ಮತ್ತೊಂದು ದಾಖಲೆ ಬರೆದಿದ್ದಾಳೆ. ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್ಸ್ ನಲ್ಲಿ ಈಕೆಯ ಈ ಸಾಧನೆ ದಾಖಲಾಗಿದೆ. ಸ್ವಾತಂತ್ರ್ಯೋತ್ಸವದ ದಿನಾಚರಣೆಯ ಸಂದರ್ಭದಲ್ಲಿ ಈ ಯೋಗ ದಾಖಲೆ ಸದ್ದು ಮಾಡಿದೆ.

ಈಕೆಗೆ ಒಂದು ಗಂಟೆಯ ಅವಧಿಯಲ್ಲಿ 200 ಯೋಗಾಸನಗಳನ್ನು ಮಾಡುವ ಟಾರ್ಗೆಟ್ ನೀಡಲಾಗಿತ್ತು. ಆದರೆ ಕೇವಲ 43 ನಿಮಿಷ 18 ಸೆಕುಂಡ್ ಗಳಲ್ಲಿ 245 ಆಸನಗಳನ್ನು ಮಾಡುವ ಮೂಲಕ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾಳೆ. ಇಲ್ಲಿ ಪ್ರದರ್ಶನವಾದ ಪ್ರತಿಯೊಂದು ಆಸನಗಳೂ ಒಂದಕ್ಕಿಂತ ಮತ್ತೊಂದು ಕಠಿಣವಾಗಿದ್ದವು ಅನ್ನೋದು ವಿಶೇಷ.

 

ತನುಶ್ರೀ ಪಿತ್ರೋಡಿ

 

2017ರಲ್ಲಿ ತನುಶ್ರೀ ಯೋಗದ ನಿರಾಲಂಭ ಪೂರ್ಣ ಚಕ್ರಾಸನವನ್ನು ಒಂದೇ ನಿಮಿಷದಲ್ಲಿ 19 ಬಾರಿ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ್ದಳು. 2018ರಲ್ಲಿ ದೇಹದ ಎದೆಯ ಭಾಗ ಹಾಗೂ ತಲೆಯನ್ನು ಸ್ಥಿರವಾಗಿ ಇರಿಸಿ ಉಳಿದ ಭಾಗವನ್ನು ನಿಮಿಷಕ್ಕೆ 41 ಬಾರಿ ತಿರುಗಿಸುವ ಮೂಲಕ ಇನ್ನೊಂದು ಗಿನ್ನೆಸ್ ದಾಖಲೆ ಬರೆದಿದ್ದಳು. ಧನುರ್ ಆಸನದಲ್ಲಿ ಎರಡು ಬಾರಿ, ಚಕ್ರಾಸನ ರೇಸ್ ವಿಭಾಗ ಮತ್ತು ಮೋಸ್ಟ್ ಬಾಡಿ ಸ್ಕಿಪ್ ವಿಭಾಗಗಳಲ್ಲಿ ಮಾಡಿರುವ ಸಾಧನೆ ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದೆ. ಈಗ ದಾಖಲಾಗಿರೋದು ಏಳನೇ ವಿಶ್ವದಾಖಲೆ ಅನ್ನೋದು ಈಕೆಯ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಯೋಗಕ್ಕೆಂದು ಈಕೆ ಹೆಚ್ಚೇನೂ ತರಬೇತಿ ಪಡೆದವಳಲ್ಲ. ಪ್ರತೀ ಆಸನವನ್ನೂ ಯೂಟ್ಯೂಬ್ ನಲ್ಲಿ ವೀಕ್ಷಿಸಿ ತಾಯಿಯ ಮಾರ್ಗದರ್ಶನದಲ್ಲಿ ನಿತ್ಯ ಅಭ್ಯಾಸ ಮಾಡಿದ್ದಾಳೆ. ಸತತ ಅಭ್ಯಾಸದ ನಂತರ ಈಗ ಸಾಧನೆಯ ಪುಟದಲ್ಲಿ ಹೆಸರು ಬರೆದಿದ್ದಾಳೆ. ತಂದೆ ಉದಯ ಕುಮಾರ್ಮತ್ತು ತಾಯಿ ಸಂಧ್ಯಾ ಅವರ ಗರಡಿಯಲ್ಲಿ ಮನೆಯಲ್ಲಿಯೇ ನಿರಂತರ ಅಭ್ಯಾಸ ನಡೆಸುತ್ತಿರುವ ಈಕೆ ಉಡುಪಿ ಸೈಂಟ್ಸಿಸಿಲೀ ಶಾಲೆಯಲ್ಲಿ 8 ನೇ ತರಗತಿಯ ವಿದ್ಯಾರ್ಥಿನಿ. ನೃತ್ಯದಲ್ಲೂ ಇವಳು ನಿಪುಣೆ, ಹಾಗಾಗಿ ಈಕೆಯ ಯೋಗ ಭಂಗಿಗಳಲ್ಲಿ ನೃತ್ಯದ ನಾಜೂಕುತನವೂ ಇದೆ.


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ