ಹುಬ್ಬಳ್ಳಿ: ನಾನು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷ ಏನೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ ಎಂದು ಉದ್ಯಮಿ ಹಾಗೂ ಮಾಜಿ ಸಂಸದ ವಿಜಯ ಸಂಕೇಶ್ವರ್ ಹೇಳಿದ್ದಾರೆ. ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಸಭೆಗೆ ಸ್ಪರ್ಧಿಸುವ ಕುರಿತು ನನ್ನ ಜೊತೆ ಯಾರೂ ಚರ್ಚಿಸಿಲ್ಲ ಎಂದಿದ್ದಾರೆ. ಉತ್ತರ ಕರ್ನಾಟಕ ಭಾಗದ ಲಿಂಗಾಯತ ಮುಖಂಡರನ್ನು ರಾಜ್ಯ ಸಭೆಗೆ ಕಳಿಸುವ ಚರ್ಚೆ ಹಾಗೂ ರಾಜ್ಯ ಸಭೆ ಪ್ರವೇಶಿಸಲು ನಡೆಯುತ್ತಿರುವ ಲಾಬಿಗಳ ಕುರಿತು ಪ್ರತಿಕ್ರಿಯಿಸಲು ವಿಜಯ ಸಂಕೇಶ್ವರ್ ನಿರಾಕರಿಸಿದ್ದಾರೆ.
ಕೊರೊನಾ ಮಹಾಮಾರಿಯ ಮುಂದೆ ಇಡೀ ಜಗತ್ತು ಮಂಡಿಯೂರಿದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಕೊರೋನಾ ಸಂಕಷ್ಟವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂದು ವಿಜಯ ಸಂಕೇಶ್ವರ್ ಶ್ಲಾಘಿಸಿದ್ದಾರೆ. ಪೊಲೀಸ್ ಇಲಾಖೆ, ವೈದ್ಯರು, ಮಾಧ್ಯಮಗಳ ಕಾರ್ಯ ದೊಡ್ಡದು. ಮಾಧ್ಯಮದವರು ತಮ್ಮ ಜೀವ ಪಣಕ್ಕಿಟ್ಟು ಕೊರೋನಾ ವಿರುದ್ಧ ಹೋರಾಡುತ್ತಿದ್ದಾರೆ. ಪತ್ರಕರ್ತರಿಗೂ ಜೀವ ವಿಮೆ ನೀಡಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ನಮ್ಮ ಸಂಸ್ಥೆಯ ಸಿಬ್ಬಂದಿ ಕೊರೊನಾದಿಂದ ಸಾವನ್ನಪ್ಪಿದರೆ 50 ಲಕ್ಷ ರೂಪಾಯಿ ಪರಿಹಾರ ಕೊಡುತ್ತೇವೆ ಎಂದವರು ಘೋಷಿಸಿದ್ದಾರೆ.
ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯದಲ್ಲಿ ಕೊರೊನಾ ಹೆಚ್ಚು ಹರಡಿದೆ. ಕೊರೊನಾ ನಿಯಂತ್ರಣ ಮಾಡುವಲ್ಲಿ ಅಲ್ಲಿನ ಸರ್ಕಾರಗಳು ಸಮರ್ಥವಾಗಿಲ್ಲ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಕೊರೋನಾ ನಿಯಂತ್ರಣದಲ್ಲಿದೆ. ಯಡಿಯೂರಪ್ಪ ಕೊರೋನಾ ವಿರುದ್ಧ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಯಡಿಯೂರಪ್ಪ ಕಾರ್ಯವೈಖರಿ ಕಂಡು ನರೇಂದ್ರ ಮೋದಿ ಕೂಡ ಹೊಗಳಿದ್ದಾರೆ. ಮೋದಿಯವರಿಂದ ಪ್ರಶಂಸೆ ಪಡೆಯೋದು ಅಷ್ಟು ಸುಲಭವಾದ ಮಾತಲ್ಲ. ಯಡಿಯೂರಪ್ಪನವರ ಕೆಲಸದ ಬಗ್ಗೆ ನನಗೆ ಹೆಮ್ಮೆಯಿದೆ. ನನಗೆ ಬರುವ ಮಾಜಿ ಸಂಸದ, ವಿಧಾನ ಪರಿಷತ್ ಸದಸ್ಯರ ನಿವೃತ್ತಿ ಹಣವನ್ನು ಇನ್ನು ಮುಂದೆ ಪಡೆಯಲ್ಲ. ಸಂಪೂರ್ಣ ಪಿಂಚಣಿಯನ್ನು ಕೊರೋನಾ ರಿಲಿಫ್ ಫಂಡ್‌ಗೆ ದೇಣಿಗೆಯಾಗಿ ನೀಡಿದ್ದೇನೆ ಎಂದು ವಿಜಯ ಸಂಕೇಶ್ವರ ಸ್ಪಷ್ಟಡಿಸಿದ್ದಾರೆ.