Breaking News

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರ ಜತೆ ನಾನು ಯಾವುದೇ ಪೈಪೋಟಿ ನಡೆಸುವುದಿಲ್ಲ: ಡಿ.ಕೆ.ಶಿವಕುಮಾರ್

Spread the love

ಬೆಂಗಳೂರು, ಜೂ.21- ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರ ಜತೆ ನಾನು ಯಾವುದೇ ಪೈಪೋಟಿ ನಡೆಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ಪಕ್ಷವೇ ಒಂದು ಶಕ್ತಿ.

ನಾನು ಅಧ್ಯಕ್ಷ ಹುದ್ದೆಯಲ್ಲಿದ್ದರೆ ಸಿದ್ದರಾಮಯ್ಯನವರು ಶಾಸಕಾಂಗ ಪಕ್ಷದ ನಾಯಕ ಸ್ಥಾನದಲ್ಲಿದ್ದಾರೆ. ಅವರ ಹಿರಿತನ ಹಾಗೂ ಅನುಭವವನ್ನು ನಾನು ಸಂಪೂರ್ಣವಾಗಿ ಗೌರವಿಸುತ್ತೇನೆ. ಅವರ ಜತೆ ನಾನು ಪೈಪೋಟಿಗಿಳಿಯುವುದಿಲ್ಲ ಎಂದು ಹೇಳಿದ್ದಾರೆ

 

ರಾಜಕೀಯದಲ್ಲಿ ಡಿ.ಕೆ.ಶಿವಕುಮಾರ್ ಅವರ ಈ ಹೇಳಿಕೆ ಭಾರೀ ಸಂಚಲನ ಮೂಡಿಸಿದೆ. ಡಿ.ಕೆ.ಶಿವಕುಮಾರ್ ಅವರು ಮಾರ್ಚ್ 12ರಂದು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡರು. ವಿಧಾನಸಭೆ ಉಪಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದಾಗ ಸೋಲಿನ ನೈತಿಕ ಹೊಣೆ ಹೊತ್ತು ಆಗಿನ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದರು.

ಕಾಂಗ್ರೆಸ್ ಹೈಕಮಾಂಡ್ ದಿನೇಶ್ ಗುಂಡೂರಾವ್ ಅವರ ರಾಜೀನಾಮೆಯನ್ನು ಅಂಗೀಕರಿಸಿ ಪರ್ಯಾಯ ನಾಯಕತ್ವದ ಹುಡುಕಾಟದಲ್ಲಿದ್ದಾಗ ಸಾಕಷ್ಟು ಮಂದಿ ನಾಯಕರು ಆಕಾಂಕ್ಷಿಗಳಾಗಿದ್ದರು. ಅದರಲ್ಲೂ ಸಿದ್ದರಾಮಯ್ಯ ಅವರ ಬೆಂಬಲಿಗರಾಗಿದ್ದ ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ ಅವರು ಸಾಕಷ್ಟು ಲಾಬಿ ಮಾಡಿದ್ದರು.

ಹೈಕಮಾಂಡ್ ಸಿದ್ದರಾಮಯ್ಯನವರ ರಾಜೀನಾಮೆ ತಿರಸ್ಕರಿಸಿ ಪ್ರತಿಪಕ್ಷದ ನಾಯಕ ಸ್ಥಾನದಲ್ಲಿ ಮುಂದುವರಿಯುವಂತೆ ಸೂಚನೆ ನೀಡಿತ್ತು. ಆದರೆ, ಅಧ್ಯಕ್ಷರ ಆಯ್ಕೆ ವಿಷಯ ಬಂದಾಗ ಸಾಕಷ್ಟು ಗೊಂದಲ, ಅಡ್ಡಿ-ಆತಂಕಗಳಿದ್ದವು. ಎಲ್ಲವನ್ನೂ ಮೀರಿ ಹೈಕಮಾಂಡ್ ಕೊನೆಗೆ ಡಿ.ಕೆ.ಶಿವಕುಮಾರ್ ಅವರನ್ನೇ ನೇಮಕ ಮಾಡಿ ಆದೇಶ ಹೊರಡಿಸಿತ್ತು.

ನೇಮಕವಾದ ಕ್ಷಣದಿಂದ ಡಿ.ಕೆ.ಶಿವಕುಮಾರ್ ಒಂದು ನಿಮಿಷವೂ ವ್ಯಯ ಮಾಡದೆ ಕಾರ್ಯಾಚರಣೆಗಿಳಿದರು. ಕೊರೊನಾದಿಂದಾಗಿ ಸಂತ್ರಸ್ತರಾಗಿರುವ ರೈತರ ನೆರವಿಗೆ ದಾವಿಸಿದರು. ಎಲ್ಲೆಡೆ ರೈತರು ಬೆಳೆದ ತರಕಾರಿಗಳನ್ನು ಖರೀದಿಸಿ ಜನಸಾಮಾನ್ಯರಿಗೆ ಹಂಚುವಂತೆ ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು. ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗಿದ್ದು, ಶ್ಲಾಘನೆಗೆ ಕಾರಣವಾಯಿತು.

ಆ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರು ವಿವಿಧ ಸಮುದಾಯಗಳ ನಾಯಕರ ಜತೆ ಸಭೆ ನಡೆಸಿ, ಶ್ರಮಿಕರ ಜತೆ ಸಮಾಲೋಚನೆ ನಡೆಸಿ ಕೋವಿಡ್‍ನಿಂದ ಸಂತ್ರಸ್ತರಾದವರಿಗೆ ವಿಶೇಷ ಪ್ಯಾಕೇಜ್ ನೀಡಬೇಕೆಂದು ಒತ್ತಾಯಿಸಲಾರಂಭಿಸಿದರು. ಡಿ.ಕೆ.ಶಿವಕುಮಾರ್ ಅವರು ವಲಸಿಗ ಕಾರ್ಮಿಕರ ನೆರವಿಗೆ ದಾವಿಸಿ ಅವರಿಗೆ ಉಚಿತ ಪ್ರಯಾಣದ ವ್ಯವಸ್ಥೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ತಂದರು.

ಅಂತರ ಜಿಲ್ಲಾ ಪ್ರಯಾಣಿಕರಿಂದ ರಾಜ್ಯದ ಸಾರಿಗೆ ಸಂಸ್ಥೆಗಳು ದುಪ್ಪಟ್ಟು ಪ್ರಯಾಣದರ ವಸೂಲಿ ಮಾಡಿದಾಗ ಕೆಪಿಸಿಸಿಯಿಂದ 1 ಕೋಟಿ ಚೆಕ್ ಕೊಟ್ಟು ಪ್ರಯಾಣ ವೆಚ್ಚವನ್ನು ಕಾಂಗ್ರೆಸ್ ತುಂಬಿಕೊಡಲಿದೆ. ಊರಿಗೆ ಹೋಗುವವರಿಗೆ ಉಚಿತ ವ್ಯವಸ್ಥೆ ಮಾಡಿ ಎಂದು ಸರ್ಕಾರದ ಮೇಲೆ ಒತ್ತಡ ಹೇರಿದರು.

ಅದರ ಪರಿಣಾಮ ಮೂರು ದಿನ ಉಚಿತ ಪ್ರಯಾಣಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು. ಕೆಲವು ವಿಷಯಗಳಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯನರ ನಡುವೆ ಪರಸ್ಪರ ಪೈಪೋಟಿ ಇದ್ದಂತೆ ಕಂಡುಬಂದಿತ್ತು. ಸಿದ್ದರಾಮಯ್ಯ ಅವರು ಕೂಡ ಡಿ.ಕೆ.ಶಿವಕುಮಾರ್ ಹಾಗೂ ನನ್ನ ನಡುವೆ ಯಾವುದೇ ಪೈಪೋಟಿ ಇಲ್ಲ. ನಾವು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

ಈಗ ಡಿ.ಕೆ.ಶಿವಕುಮಾರ್ ಕೂಡ ಸ್ಪಷ್ಟನೆ ನೀಡಿ ಸಿದ್ದರಾಮಯ್ಯ ಅವರ ಜತೆ ಪೈಪೋಟಿಗಿಳಿಯುವುದಿಲ್ಲ ಎಂದು ಹೇಳಿದ್ದಾರೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್‍ನಲ್ಲಿನ ವಾತಾವರಣ ತಿಳಿಯಾಗಲಿದೆಯೇ ಎಂಬ ನಿರೀಕ್ಷೆಗಳು ಚಿಗುರೊಡೆದಿವೆ.


Spread the love

About Laxminews 24x7

Check Also

ನಮ್ಮ ಬೆಂಗಳೂರಿನಲ್ಲಿರುವ ಕ್ರಿಕೆಟ್ ಕ್ರೀಡಾಂಗಣದ ಹೆಸರಿರೋದು ಎಂ. ಚಿನ್ನಸ್ವಾಮಿ ಅವರ ಹೆಸರಲ್ಲಿ. ಅಷ್ಟೊಂದು ಘಟಾನುಘಟಿ ಕ್ರಿಕೆಟ್ ಪಟುಗಳಿದ್ದ ನಮ್ಮ ರಾಜ್ಯದಲ್ಲಿ ಇಂತಹ ದೊಡ್ಡ ಕ್ರಿಕೆಟ್ ಸ್ಥಾವರಕ್ಕೆ ಇವರ ಹೆಸರಿರಬೇಕಾದರೆ ಈ ಮಹನೀಯರ ಸಾಮರ್ಥ್ಯ ಎಂತದ್ದಿರಬಹುದು!

Spread the loveಎಂ. ಚಿನ್ನಸ್ವಾಮಿ ನಮ್ಮ ಬೆಂಗಳೂರಿನಲ್ಲಿರುವ ಕ್ರಿಕೆಟ್ ಕ್ರೀಡಾಂಗಣದ ಹೆಸರಿರೋದು ಎಂ. ಚಿನ್ನಸ್ವಾಮಿ ಅವರ ಹೆಸರಲ್ಲಿ. ಅಷ್ಟೊಂದು ಘಟಾನುಘಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ