ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಭರಣಿ ಮಳೆ ಅಬ್ಬರಕ್ಕೆ ಮಲೆನಾಡಿಗರು ತತ್ತರಿಸಿದೆ.
ಮೂಡಿಗೆರೆಯಲ್ಲಿ ಸಂಜೆಯಿಂದ ಧಾರಾಕಾರ ಮಳೆ ಸುರಿದಿದ್ದು, ಜನ ಆತಂಕಕ್ಕೀಡಾಗಿ, ಕಳೆದ ವರ್ಷದ ಮಳೆಯನ್ನು ನೆನಪಿಸಿಕೊಂಡಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ತೋರಣಮಾವು ಗ್ರಾಮದಲ್ಲಿ ಮಳೆ ಆರಂಭಕ್ಕೂ ಮುನ್ನ ಸಿಡಿಲು ಬಡಿದು ತೆಂಗಿನ ಮರವೊಂದು ಹೊತ್ತಿ ಉರಿದಿದೆ. ನೋಡನೋಡ್ತಿದ್ದಂತೆ ತೆಂಗಿನ ಸಂಪೂರ್ಣ ಸುಟ್ಟು ಕರಕಲಾಗಿದೆ.
ಚಿಕ್ಕಮಗಳೂರು ತಾಲೂಕಿನ ಬಯಲುಸೀಮೆ ಭಾಗ ಕಳಸಾಪುರ, ಬೆಳವಾಡಿ ಹಾಗೂ ಮಾಗಡಿ ಸುತ್ತಮುತ್ತಲೂ ವರುಣದೇವ ಅಬ್ಬರಿಸಿದ್ದಾನೆ. ಸುಮಾರು ಒಂದು ಗಂಟೆಗಳ ಕಾಲ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ಮಳೆ ನೀರು ರಸ್ತೆ ಮೇಲೆ ಉಕ್ಕಿ ಹರಿದಿದೆ. ಕಳಸಾಪುರ ಗ್ರಾಮದಲ್ಲಿ ಕೆಲ ಮನೆಗಳ ಒಳಗೂ ನೀರು ನುಗ್ಗಿದ್ದು, ತಗ್ಗು ಪ್ರದೇಶದ ಜನ ಪರದಾಡುವಂತಾಗಿದೆ.
ಕಳಸಾಪುರ, ಬೆಳವಾಡಿ ಸಂಪೂರ್ಣ ಬಯಲುಸೀಮೆ ಭಾಗ. ಈ ಭಾಗದಲ್ಲಿ ಮಳೆ ಸುರಿದಿದ್ದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕಡೂರು ತಾಲೂಕಿನ ಬೀರೂರು ಸುತ್ತಮುತ್ತ ಕೂಡ ಸಾಧಾರಣ ಮಳೆಯಾಗಿದೆ. ಮೂಡಿಗೆರೆ ತಾಲೂಕಿನ ಕೆಲ ಭಾಗ ಸಂಜೆಯಿಂದಲೇ ವರುಣದೇವ ಅಬ್ಬರಿಸಿ ಬೊಬ್ಬಿರಿದಿದ್ದು, ಮಳೆಯ ಅಬ್ಬರ ಕಂಡು ಜನ ಕಂಗಾಲಾಗಿದ್ದಾರೆ.