ಬೆಳಗಾವಿ: ಜಿಲ್ಲಾಡಳಿತ ಮತ್ತು ಬಿಮ್ಸ್ ಆಸ್ಪತ್ರೆ ಎಡವಟ್ಟಿನಿಂದ ಕೊವಿಡ್ ವಿಚಾರದಲ್ಲಿ ಎರಡನೇ ಬೆಂಗಳೂರು ಆಗ್ತಿದೆಯಾ ಕುಂದಾನಗರಿ ಎಂಬ ಆತಂಕ ಉಂಟಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ.
ನಿತ್ಯವೂ ಬೆಳಗಾವಿಯಲ್ಲಿ ಸೋಂಕಿತರ ಸಂಖ್ಯೆ ಇನ್ನೂರು, ಮುನ್ನೂರರ ಗಡಿ ದಾಟುತ್ತಿದೆ. ಜಿಲ್ಲಾಡಳಿತ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾದ್ರೂ ಮುಚ್ಚಿಡುವ ಪ್ರಯತ್ನ? ಮಾಡುತ್ತಿದೆ. ಮೃತದೇಹ ಸಾಗಿಸುವ ವಾಹನದ ಡ್ರೈವರ್ ಹೇಳುವಂತೆ ನಿತ್ಯವೂ ಹದಿನೈದರಿಂದ ಹದಿನೆಂಟು ಸೋಂಕಿತರು ಮೃತಪಡುತ್ತಿದ್ದಾರಂತೆ. ವಯಸ್ಸಾದವರು ಆಸ್ಪತ್ರೆಗೆ ದಾಖಲಾದ್ರೂ ಚಿಕಿತ್ಸೆ ಸಿಗ್ತಿಲ್ಲ. ಕೊವಿಡ್ ನೆಪದಲ್ಲಿ ಉಳಿದ ರೋಗಕ್ಕೆ ಚಿಕಿತ್ಸೆ ನೀಡುತ್ತಿಲ್ಲ ಎಂಬ ಗಂಭೀರ ಆರೋಪ ಬಿಮ್ಸ್ ಆಸ್ಪತ್ರೆ ವಿರುದ್ಧ ಹೇಳಿ ಬಂದಿದೆ. ಬೇರೆ ರೋಗಕ್ಕೆ ಚಿಕಿತ್ಸೆ ಸಿಗದೆ ಕೊವಿಡ್-19 ವಾರ್ಡ್‌ನಲ್ಲಿ ಸೋಂಕಿತರು ಸಾಯುತ್ತಿದ್ದಾರೆ. ಜಿಲ್ಲೆಯ ಹೆಲ್ತ್ ಬುಲೆಟಿನ್‌ನಂತೆ ವಾರದಲ್ಲಿ 30 ಜನ ಕೊರೊನಾಗೆ ಬಲಿಯಾಗುತ್ತಿದ್ದಾರೆ. ಬಿಮ್ಸ್ ಆಸ್ಪತ್ರೆ ಮೂಲಗಳಂತೆ 70ಕ್ಕೂ ಹೆಚ್ಚು ಜನ ಮೃತಪಡುತ್ತಿದ್ದಾರೆ. 50 ವರ್ಷಕ್ಕಿಂತ ಮೇಲ್ಪಟ್ಟವರೇ ಹೆಚ್ಚಿನ ಸಂಖ್ಯೆಯಲ್ಲಿ ಸಾಯುತ್ತಿದ್ದಾರೆ. ತೀವ್ರ ಉಸಿರಾಟದ ಸಮಸ್ಯೆಯಿಂದಲೇ ಹೆಚ್ಚಿನ ಜನರು ಬಲಿಯಾಗುತ್ತಿದ್ದಾರೆ. ಕೊರೊನಾ ಸೋಂಕಿತರಿಗೆ ಹೃದಯ ಸಂಬಂಧಿ ಕಾಯಿಲೆ, ಮಧುಮೇಹ, ಕಿಡ್ನಿ ಸಮಸ್ಯೆ ಸೇರಿ ಹಲವು ಕಾಯಿಲೆಗಳಿದ್ದು ಇವರಿಗೆ ಕೊವಿಡ್ ವಾರ್ಡ್‌ನಲ್ಲಿ ಸರಿಯಾದ ಚಿಕಿತ್ಸೆ ಸಿಗ್ತಿಲ್ಲ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚುತ್ತಿದೆ.