ಬಂಗಾರಪೇಟೆ: ಕೋವಿಡ್ ಪಾಸಿಟಿವ್ ಇದ್ದರೂ ಪ್ರಾಣಕ್ಕೆ ಯಾವುದೇ ತೊಂದರೆ ಇಲ್ಲ. ಜಿಲ್ಲೆಯಲ್ಲಿ ಇದುವರೆಗೂ 850ಕ್ಕೂ ಹೆಚ್ಚು ಜನರು ಗುಣಮುಖರಾಗಿ ಮನೆಗಳಿಗೆ ತೆರಳಿದ್ದಾರೆ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಸೋಂಕಿತರಿಗೆ ಧೈರ್ಯ ತುಂಬಿದರು.
ತಾಲೂಕಿನ ಬೂದಿಕೋಟೆ ಹೋಬಳಿಯ ಎಳೇಸಂದ್ರ ವಸತಿ ಶಾಲೆಯಲ್ಲಿ ಪ್ರಾರಂಭಿಸಲಾದ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ಸೋಂಕಿತರ ಜೊತೆ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕೋವಿಡ್ ಪಾಸಿಟಿವ್ ಬಂದ ಮೇಲೆ ಮರಣ ಗ್ಯಾರಂಟಿ ಎನ್ನುವುದನ್ನು ತಮ್ಮ ಮನಸ್ಸಿನಿಂದ ತೆಗೆದುಹಾಕಿ, ತಮ್ಮ ದೇಹದಲ್ಲಿ ಕೋವಿಡ್ ಪಾಸಿಟಿವ್ ಇದ್ದರೂ ಪ್ರಾಣಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ಜಿಲ್ಲೆಯಲ್ಲಿ ಇದುವರೆಗೂ 850ಕ್ಕೂ ಹೆಚ್ಚು ಸೋಂಕಿತರ ಕೋವಿಡ್ ವರದಿ ನೆಗೆಟಿವ್ ಬಂದು ಮನೆಗಳಿಗೆ ತೆರಳಿದ್ದಾರೆ ಎಂದು ಹೇಳಿದರು.
ಡೀಸಿ ಸಂತಸ: ತಾಲೂಕಿನ ಎಳೇಸಂದ್ರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತಾತ್ಕಾಲಿಕ ಕೋವಿಡ್ ಆಸ್ಪತ್ರೆ ಮಾಡಿರುವುದರಿಂದ ಇಲ್ಲಿರುವ ಕೋವಿಡ್ ಪಾಸಿಟಿವ್ ರೋಗಿಗಳಿಗೆ ಉತ್ತಮ ಅರೋಗ್ಯ, ವಸತಿ, ಊಟ ಸಿಗುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳು ಸಂತಸ ವ್ಯಕ್ತಪಡಿಸಿದರು.
ಮಾದರಿ ಆಸ್ಪತ್ರೆ: ಪ್ರತಿ ದಿನ ಬಿಸಿ ನೀರು ಕುಡಿಯುವ ನೀರು, ಸರಿಯಾದ ಸಮಯಕ್ಕೆ ತಿಂಡಿ, ಊಟ ಸೇರಿದಂತೆ ಎಲ್ಲಾ ಸೌಲಭ್ಯಗಳು ಸಮರ್ಪಕವಾಗಿ ಸಿಗುತ್ತಿದೆ ಎಂದು ಕೋವಿಡ್ ಸೋಂಕಿತರೇ ಧೈರ್ಯವಾಗಿ ಹೇಳುತ್ತಿರುವುದರಿಂದ ಜಿಲ್ಲೆಯ ಎಲ್ಲಾ ಕೋವಿಡ್ ಆಸ್ಪತ್ರೆಗಳಿಗೆ ಮಾದರಿಯಾಗಿದೆ ಎಂದು ತಿಳಿಸಿದರು.
ಪತ್ರಿಕೆಗಳನ್ನು ಓದಿ: ಆಸ್ಪತ್ರೆಯಲ್ಲಿ ಸಮಯ ಕಳೆಯಲು ಅಸಾಧ್ಯವಾಗಿದ್ದರೂ ಅನಿವಾರ್ಯತೆ ಇದೆ. ಕೊಠಡಿಯಿಂದ ಆಸ್ಪತ್ರೆಯ ಕಾಂಪೌಂಡ್ ಒಳಗೆ ಯಾರೂ ವಾಕಿಂಗ್ ಹೆಸರಿನಲ್ಲಿ ಓಡಾಡಬಾರದು. ಸಮಯ ಕಳೆಯಲು ದಿನಪತ್ರಿಕೆಗಳು, ವಾರ ಪತ್ರಿಕೆಗಳು, ಮಾಸ ಪತ್ರಿಕೆಗಳನ್ನು ತಂದುಕೊಡಬೇಕು ಎಂದು ಹೇಳಿದರು.
ಇದಲ್ಲದೇ ಸಹಭಾಳ್ವೆಯಿಂದ ಎಲ್ಲಾ ರೋಗಿಗಳು ಅಂತ್ಯಾಕ್ಷರಿ, ಏಕಪಾತ್ರ ಅಭಿನಯ, ನಾಟಕ ಸೇರಿದಂತೆ ಗ್ರಾಮೀಣ ಪ್ರದೇಶದ ಸೊಗಡನ್ನು ಮೀರಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುತ್ತಾ, ಸಂತೋಷದಿಂದ ಜೀವನ ಕಳೆಯಬೇಕೆಂದು ಸಲಹೆ ನೀಡಿದರು. ಕೋವಿಡ್ ಆಸ್ಪತ್ರೆಯಲ್ಲಿ ಇಲ್ಲಿನ ವೈದ್ಯರು ರೋಗಿಗಳನ್ನು ಕೈಯಿಂದ ಮುಟ್ಟುತ್ತಾರೆಯೇ, ಆಗ್ಗಿಂದಾಗ್ಗೆ ನೀಡಬೇಕಾಗಿರುವ ಎಲ್ಲಾ ಊಟೋಪಾಚಾರಗಳನ್ನು ಮಾಡುತ್ತಾರೆಯೇ, ಹೆಚ್ಚಾಗಿ ಬಿಸಿ ನೀರು ಕುಡಿಯಲು ವ್ಯವಸ್ಥೆ ಮಾಡುತ್ತಿದ್ದಾರೆಯೇ, ರೋಗಿಗಳೊಂದಿಗೆ ವೈದ್ಯರು ಹಾಗೂ ಸಿಬ್ಬಂದಿ ಅನೂನ್ಯತೆಯಿಂದ ನಡೆದುಕೊಳ್ಳುತ್ತಾರೆಯೇ ಎಂದೆಲ್ಲಾ ಜಿಲ್ಲಾಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ರೋಗಿಗಳು ಎಲ್ಲಾ ವ್ಯವಸ್ಥೆಗಳು ಮಾಡುತ್ತಿದ್ದಾರೆ. ಮೂಲ ಸೌಲಭ್ಯಗಳಿವೆ ಎಂದು ನೀಡಿದರು. ತಹಶೀಲ್ದಾರ್ ಕೆ.ರಮೇಶ್, ತಾಪಂ ಇಒ ಎನ್.ವೆಂಕಟೇಶಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯಕುಮಾರಿ, ಆಸ್ಪತ್ರೆಯ ಉಸ್ತುವಾರಿ ಡಾ.ಪುಣ್ಯಮೂರ್ತಿ, ಕಂದಾಯ ನಿರೀಕ್ಷಕ ಎಂ.ಗೋಪಾಲ್, ಆರೋಗ್ಯ ನಿರೀಕ್ಷಕ ಆರ್.ರವಿ ಸೇರಿದಂತೆ ಹಲವಾರು ಅಧಿಕಾರಿಗಳು ಹಾಜರಿದ್ದರು