ಬಳ್ಳಾರಿ: ಮಹಾಮಾರಿ ಕೊರೊನಾ ರಣಕೇಕೆ ಬಳ್ಳಾರಿ ಜಿಲ್ಲೆಯಲ್ಲಿ ಮುಂದುವರೆದಿದ್ದು ಜಿಲ್ಲೆಗೆ ಜಿಂದಾಲ್ ಉಕ್ಕು ಕಂಪನಿ ಕಂಟಕವಾಗಿ ಪರಿಣಮಿಸಿದೆ. ಇಂದು ಒಂದೇ ದಿನ ಜಿಂದಾಲ್ ನಲ್ಲಿ 46 ಪ್ರಕರಣಗಳು ದಾಖಲಾಗುವ ಮೂಲಕ ಜಿಂದಾಲ್ ನೌಕರರಲ್ಲಿ ಈವರೆಗೂ ಕಾಣಿಸಿಕೊಂಡ ಸೋಂಕಿತರ ಸಂಖ್ಯೆ 86ಕ್ಕೆ ಏರಿಕೆ ಆಗಿದೆ.
ಬಳ್ಳಾರಿ ಜಿಲ್ಲೆಯ ತೋರಣಗಲ್ ಬಳಿ ಇರುವ ಜಿಂದಾಲ್ ಸಮೂಹ ಸಂಸ್ಥೆಯಲ್ಲಿ 33 ಸಾವಿರಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಲಾಕ್‍ಡೌನ್ ಆರಂಭ ಆಗಿನಿಂದಲೂ ಜಿಂದಾಲ್ ಕಂಪನಿಯನ್ನು ಸಂಪೂರ್ಣವಾಗಿ ಮುಚ್ಚುವಂತೆ ಸ್ಥಳೀಯ ಪ್ರತಿನಿಧಿಗಳು ಆಗ್ರಹ ಮಾಡಿದ್ದರು. ಆದರೆ ಇಷ್ಟು ದಿನ ಜಿಂದಾಲ್ ನಲ್ಲಿ ಒಂದೇ ಒಂದು ಪ್ರಕರಣ ಪತ್ತೆ ಆಗಿರಲಿಲ್ಲ. ಕಳೆದ ಒಂದು ವಾರದಿಂದ ಜಿಂದಾಲ್ ನಲ್ಲಿ ಕೊರೊನಾ ರಣಕೇಕೆ ಮುಂದುವರೆದಿದೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 147ಕ್ಕೆ ಏರಿಕೆಯಾದರೆ ಇದರಲ್ಲಿ ಜಿಂದಾಲ್ ಸೋಂಕಿತರ ಸಂಖ್ಯೆ 86. ಕಳೆದ ಎರಡು ದಿನಗಳಿಂದ ಜಿಂದಾಲ್ ನಲ್ಲಿ ಸೋಂಕಿತರ ಪ್ರಮಾಣ ಹೆಚ್ಚಳವಾಗುವುದನ್ನು ಗಮನಿಸಿದ ಜಿಲ್ಲಾಧಿಕಾರಿ ಎಸ್‍ಎಸ್ ನಕುಲ್ ಅವರು ಜಿಂದಾಲ್ ಓಪಿಜಿ ಸೆಂಟರ್ ಗೆ ಅನಿರ್ಧಿಷ್ಟ ಕಾಲ ರಜೆ ನೀಡುವಂತೆ ಆದೇಶ ಮಾಡಿದ್ದಾರೆ. ಅಲ್ಲದೇ ಜಿಂದಾಲ್ ನಲ್ಲಿ ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಳ ಆಗುವ ಮುನ್ಸೂಚನೆಯನ್ನು ಜಿಲ್ಲಾಧಿಕಾರಿ ಎಸ್‍ಎಸ್ ನಕುಲ್ ನೀಡಿದ್ದಾರೆ.
ಹೀಗಾಗಿ ಜಿಂದಾಲ್‍ನ ಕೆಲ ಕಾರ್ಖಾನೆಯ ಕಾರ್ಮಿಕರ ಸಂಖ್ಯೆಯನ್ನು ಕಡಿತಗೊಳಿಸಲು ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ಅಲ್ಲದೆ ಜಿಂದಾಲ್ ಓಪಿಜಿ ಸೆಂಟರ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ರಜೆ ನೀಡುವುದರ ಜೊತೆಯಲ್ಲಿ ಎಲ್ಲ ಸಿಬ್ಬಂದಿ ಹೋಂ ಕ್ವಾರಂಟೈನ್ ಆಗಲು ಸೂಚನೆ ನೀಡಲಾಗಿದೆ. ಈಗಾಗಲೇ ಜಿಲ್ಲಾಧಿಕಾರಿ ಜಿಂದಾಲ್ ಆಡಳಿತ ಮಂಡಳಿಯ ಜೊತೆಯಲ್ಲಿ ಸಭೆ ನಡೆಸಿದ್ದು, ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಿಂದಾಲ್ ಆಡಳಿತ ಮಂಡಳಿಗೆ ಸೂಚನೆ ನೀಡಿದ್ದಾರೆ.
https://youtu.be/r6bH1CgI-Qg