ಬೆಂಗಳೂರು, ಜೂ.1- ಕೊರೊನಾ ಸೋಂಕಿತ ಬಿಬಿಎಂಪಿ ಸದಸ್ಯನೊಂದಿಗೆ ಸಂಪರ್ಕವಿರಿಸಿಕೊಂಡಿದ್ದ ಪಾಲಿಕೆಯ ಸಹಾಯಕ ಆಯುಕ್ತರೊಬ್ಬರಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ.
ಪಾಲಿಕೆ ಸದಸ್ಯನ ಪ್ರಾಥಮಿಕ ಸಂಪರ್ಕದಲ್ಲಿದ್ದ ಸಹಾಯಕ ಆಯುಕ್ತರನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿತ್ತು. ಅವರ ಗಂಟಲ ದ್ರವ ಪರೀಕ್ಷೆಗೊಳಪಡಿಸಿದಾಗ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.
ಬಿಬಿಎಂಪಿ ಸದಸ್ಯನಿಂದ ಸೋಂಕು ತಗುಲಿರುವ ಅಧಿಕಾರಿ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಓಡಾಡಿದ್ದರು ಹಾಗೂ ವಾರ್‍ರೂಮ್‍ನಲ್ಲೂ ಕೆಲಸ ಮಾಡಿದ್ದರು. ಅಧಿಕಾರಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದವರ ಪತ್ತೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಮತ್ತಿಬ್ಬರು ಬಿಬಿಎಂಪಿ ಅಧಿಕಾರಿಗಳಿಗೂ ಸೋಂಕು ತಗುಲಿರುವ ಸಾಧ್ಯತೆ ಇದ್ದು, ಮತ್ತೊಮ್ಮೆ ಅವರನ್ನು ಪರೀಕ್ಷೆಗೊಳಪಡಿಸಲಾಗುವುದು ಎಂದು ವಿಜಯೇಂದ್ರ ತಿಳಿಸಿದ್ದಾರೆ.
ಬಿಬಿಎಂಪಿ ಅಧಿಕಾರಿಗೆ ಸೋಂಕು ತಗುಲಿರುವುದರಿಂದ ಕೇಂದ್ರ ಕಚೇರಿಗೆ ಸಾರ್ವಜನಿಕ ಭೇಟಿಯನ್ನು ನಿರ್ಬಂಧಿಸಲಾಗಿದೆ. ಅಧಿಕಾರಿ ಕರ್ತವ್ಯ ನಿರ್ವಹಿಸುತ್ತಿದ್ದ ಕಚೇರಿಯನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ.
ಈ ಮಧ್ಯೆ ಸುಬ್ರಹ್ಮಣ್ಯನಗರದ 25 ವರ್ಷದ ಯುವತಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಆ ಪ್ರದೇಶವನ್ನು ಕಂಟೈನ್ಮೆಂಟ್ ಮಾಡಲಾಗುವುದು. ಯುವತಿಯ ಅಜ್ಜಿ , ತಾಯಿ ಹಾಗೂ ಇಬ್ಬರು ಸಹೋದರರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಅವರು ತಿಳಿಸಿದರು.