ಬೆಂಗಳೂರು, ಮೇ 29- ವಲಸೆ ಕಾರ್ಮಿಕರು ತಮ್ಮ ಸ್ವಸ್ಥಾನಗಳಿಗೆ ಮರಳಲು ಅನುಕೂಲವಾಗುವಂತೆ ಭಾರತೀಯ ರೈಲ್ವೆ ದೇಶಾದ್ಯಂತ ಆರಂಭಿಸಿರುವ ಶ್ರಮಿಕ್ ವಿಶೇಷ ರೈಲು ಸೇವೆಯನ್ನು ಅತಿ ಜರೂರು ಇದ್ದ ಸಂದರ್ಭದಲ್ಲಿ ಮಾತ್ರ ವಯೋ ವೃದ್ಧರು, ಮಕ್ಕಳು ಮತ್ತು ಗರ್ಭಿಣಿಯರು ಬಳಸಿಕೊಳ್ಳುವಂತೆ ಇಲಾಖೆ ಮನವಿ ಮಾಡಿದೆ.
ರಕ್ತದೊತ್ತಡ, ಮಧುಮಹ, ಹೃದಯ ರೋಗ, ಕ್ಯಾನ್ಸರ್ ಮತ್ತಿತರ ರೋಗದಿಂದ ನರಳುತ್ತಿರುವವರು, 65 ವರ್ಷ ಮೇಲ್ಪಟ್ಟವರು 10 ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿಯರು ಅಗತ್ಯವಿದ್ದರೆ ಮಾತ್ರ ಈ ವಿಶೇಷ ರೈಲುಗಳಲ್ಲಿ ಪ್ರಯಾಣ ಮಾಡುವಂತೆ ಹಾಗೂ ಪ್ರಯಾಣದ ಸಂದರ್ಭದಲ್ಲಿ ಯಾವುದೇ ತೊಂದರೆ ಎದುರಾದರೆ ಹೆಲ್ಪ್‍ಲೈನ್ ನಂ.139 ಮತ್ತು 138ನ್ನು ಸಂಪರ್ಕಿಸುವಂತೆ ಕೋರಿದೆ.
ಜೂ.1ರಿಂದ ವಿಶೇಷ ರೈಲುಗಳು ಸಂಚಾರ ನಡೆಸಲಿದ್ದು, ಅವುಗಳ ವಿವರ ಹೀಗಿದೆ.
ಬೆಂಗಳೂರಿನಿಂದ ಹುಬ್ಬಳ್ಳಿಗೆ ಮತ್ತು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರತಿ ದಿನ ರೈಲು ಸೇವೆ ಇರಲಿದೆ. ಅದೇ ರೀತಿ ಮುಂಬೈನಿಂದ ಗದಗಕ್ಕೆ ಮತ್ತು ಗದಗದಿಂದ ಮುಂಬೈಗೂ ಪ್ರತಿ ದಿನ ರೈಲು ಸಂಚಾರ ನಡೆಯಲಿದೆ.
ಗದಗದಿಂದ ಮುಂಬೈಗೆ ತೆರಳುವ ರೈಲು ಜೂ.2ರಂದು ಆರಂಭಗೊಳ್ಳಲಿದೆ. ಯಶವಂತಪುರದಿಂದ ಜೂ.2ರಿಂದ ಆರಂಭವಾಗುವ ನಿಜಾಮುದ್ದೀನ್ ಎಕ್ಸ್‍ಪ್ರೆಸ್ ವಾರದಲ್ಲಿ ಮಂಗಳವಾರ, ಗುರುವಾರ ಸಂಚರಿಸಲಿದೆ.
ನಿಜಾಮುದ್ದೀನ್‍ನಿಂದ ಜೂ.5ರಂದು ಯಶವಂತಪುರಕ್ಕೆ ಸೇವೆ ಆರಂಭವಾಗುತ್ತಿದ್ದು, ಇದು ಬುಧವಾರ, ಶುಕ್ರವಾರ ಸಂಚರಿಸಲಿದೆ. ಹುಬ್ಬಳ್ಳಿ ನಿಜಾಮುದ್ದೀನ್ ಹೊರಡುವ ರೈಲು ಜೂ.1ರಿಂದ ದಿನಪ್ರತಿ ಹಾಗೂ ನಿಜಾಮುದ್ದೀನ್‍ನಿಂದ ಹುಬ್ಬಳ್ಳಿಗೆ ಬರುವ ರೈಲು ಜೂ.3ರಿಂದ ಸೇವೆ ಪುನರಾರಂಭಿಸಲಿದೆ.