Breaking News

ಕೇಂದ್ರದ ಎಂಜಿನ್‌ಗೆ ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಬೋಗಿಯನ್ನೇ ಜೋಡಿಸಬೇಕು’: ಫಡಣವೀಸ್‌

Spread the love

ಬೆಳಗಾವಿ: ‘ಕೇಂದ್ರದಲ್ಲಿ ಬಿಜೆಪಿಯ ಎಂಜಿನ್ ಇದೆ. ಅದಕ್ಕೆ ಬೇರೆ ಪಕ್ಷದ ಬೋಗಿ ಅಳವಡಿಸಿದರೆ, ಹೈದರಾಬಾದ್‌ನಲ್ಲಿರುವ ಎಂಜಿನ್‌ ಕಡೆ ಹೋಗುತ್ತದೆ. ಹಾಗಾಗಿ ಆ ಎಂಜಿನ್‍ಗೆ ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಬೋಗಿಯನ್ನೇ ಜೋಡಿಸಬೇಕು’ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಕೋರಿದರು.

 

ಇಲ್ಲಿನ ಟಿಳಕ್ ಚೌಕ್‌ನಲ್ಲಿ ಗುರುವಾರ ನಡೆದ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ರವಿ ಪಾಟೀಲ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಡಬಲ್‌ ಎಂಜಿನ್ ಸರ್ಕಾರ ಅಧಿಕಾರದಲ್ಲಿದ್ದರೆ ಅಭಿವೃದ್ಧಿ ಚಟುವಟಿಕೆಗೆ ವೇಗ ಸಿಗುತ್ತದೆ. ರಾಜ್ಯಕ್ಕೆ ಮತ್ತೊಂದು ಅವಧಿಗೆ ಇಂತಹ ಸರ್ಕಾರದ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

‘ಪ್ರಧಾನಿ ನರೇಂದ್ರ ಮೋದಿ ಕಳೆದ 9 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಕೈಗೊಂಡಿದ್ದಾರೆ. ಆರ್ಥಿಕತೆಯಲ್ಲಿ ಭಾರತ ವಿಶ್ವದಲ್ಲೇ 5ನೇ ಸ್ಥಾನದಲ್ಲಿದೆ. 2030ರ ವೇಳೆಗೆ 3ನೇ ಸ್ಥಾನಕ್ಕೇರಲಿದೆ. ಅಭಿವೃದ್ಧಿ ಹಾಗೂ ಸುರಕ್ಷತೆ ದೃಷ್ಟಿಯಿಂದ ಈ ಬಾರಿ ಚುನಾವಣೆಯಲ್ಲೂ ಬಿಜೆಪಿಯೇ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಲಂಕೆಗೆ ಬೆಂಕಿ ಹಚ್ಚಿದ್ದ ಹಾಗೂ ಸೂರ್ಯನನ್ನೇ ಹಿಡಿಯಲು ಹೋದ ಹನುಮಂತನ ಕುರಿತಾಗಿ ಕಾಂಗ್ರೆಸ್‍ನವರಿಗೆ ತಿಳಿದಿರಲಿಕ್ಕಿಲ್ಲ. ಹಾಗಾಗಿ ಅವನ ಹೆಸರಿನಲ್ಲಿರುವ ಬಜರಂಗದಳ ನಿಷೇಧಿಸುವುದಾಗಿ ತಮ್ಮ ಚುನಾವಣೆ ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ. ಅಂದು ರಾಮನನ್ನು ವಿರೋಧಿಸಿದವರು ಇಂದು ಹನುಮನನ್ನು ವಿರೋಧಿಸುತ್ತಿದ್ದಾರೆ. ಶ್ರೀರಾಮ, ಶ್ರೀಕೃಷ್ಣ ಮತ್ತು ಭಜರಂಗಿ ಹಿಂದೂ ಸಂಸ್ಕೃತಿಯ ಅಸ್ಮಿತೆ. ಅವರ ಅಸ್ತಿತ್ವದ ಬಗ್ಗೆ ಮಾತನಾಡುವವರಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು’ ಎಂದು ತಿಳಿಸಿದರು.

‘ಕೈ ಪಡೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಿತ್ತಾಟ ನಡೆದಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವರು ತಾವೇ ಮುಖ್ಯಮಂತ್ರಿ ಎನ್ನುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಮಹಾರಾಷ್ಟ್ರದ ಸಚಿವ ಗಿರೀಶ ಮಹಾಜನ್, ಸಂಸದೆ ಮಂಗಲಾ ಅಂಗಡಿ, ಶಾಸಕ ಅನಿಲ ಬೆನಕೆ, ಡಾ.ರವಿ ಪಾಟೀಲ, ‌ಸಂಜಯ ಬೆಳಗಾಂವಕರ್‌ ಇತರರಿದ್ದರು.


Spread the love

About Laxminews 24x7

Check Also

ವರದಕ್ಷಿಣೆ ಕಿರುಕುಳ ಆರೋಪ, ಐಎಸ್‌ಡಿ ಡಿವೈಎಸ್‌ಪಿ ವಿರುದ್ಧ ಎಫ್ಐಆರ್

Spread the love ಬೆಂಗಳೂರು : ಡಿವೈಎಸ್‌ಪಿಯೊಬ್ಬರ ವಿರುದ್ಧ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. 41 ವರ್ಷದ ಮಹಿಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ