ತಳವಾರ ಮತ್ತು ಪರಿವಾರ ಸಮುದಾಯ ಬಾಂಧವರಿಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಲ್ಪಿಸಿದ ಎಸ್. ಟಿ ಮೀಸಲಾತಿ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೊಳಗೇರಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಮಹೇಶ ಕುಮಠಳ್ಳಿ ಹೇಳಿದರು.
ಅವರು ಅಥಣಿ ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ತಳವಾರ ಮತ್ತು ಪರಿವಾರ ಸಮಾಜ ಬಾಂಧವರಿಗೆ ಸಾಂಕೇತಿಕವಾಗಿ ಜಾತಿ ಪ್ರಮಾಣ ಪತ್ರ ವಿತರಿಸಿ ಮಾತನಾಡುತ್ತಿದ್ದರು. ಎಸ್.ಟಿ. ಮೀಸಲಾತಿ ಸೌಲಭ್ಯ ತಳವಾರ ಹಾಗೂ ಪರಿವಾರ ಸಮಾಜ ಬಾಂಧವರು ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಬಲರಾಗಲು ಸಹಕಾರಿಯಾಗುತ್ತದೆ ಎಂದರು.
ತಳವಾರ ಹಾಗೂ ಪರಿವಾರ ಸಮಾಜ ಬಾಂಧವರು ತಮ್ಮನ್ನು ಪ್ರ ವರ್ಗ 1 ರಿಂದ ಎಸ್.ಟಿ ಸಮುದಾಯಕ್ಕೆ ಸೇರ್ಪಡೆ ಮಾಡಬೇಕು ಎಂದು ಹಲವಾರು ವರ್ಷಗಳಿಂದ ಬೇಡಿಕೆ ಇಟ್ಟಿದ್ದರು. ಈ ಸಮುದಾಯದವರ ಬೇಡಿಕೆ ಮನ್ನಿಸಿದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಸಮುದಾಯಗಳಿಗೆ ಎಸ್.ಟಿ ಜಾತಿ ಪ್ರಮಾಣ ಪತ್ರ ಕೊಡಲು ಕಂದಾಯ ಇಲಾಖೆಯ ಮೂಲಕ ಎಲ್ಲ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದ್ದಾರೆ ಎಂದ ಅವರು ಎಸ್.ಟಿ ಮೀಸಲಾತಿ ಪ್ರಮಾಣ ಪತ್ರ ನೀಡಲು ಸಹಕರಿಸಿದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರನ್ನು ಅಭಿನಂದಿಸಿದರು .