ದಾವಣಗೆರೆ : ಜನ ಲಸಿಕೆ ಹಾಕಿಸಿಕೊಳ್ಳಲು ದಿನಕ್ಕೊಂದು ಹೈಡ್ರಾಮಾ ಮಾಡುತ್ತಿದ್ದರಿಂದ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ತಲೆನೋವು ಆಗಿ ಪರಿಣಮಿಸಿದೆ.
ದಾವಣಗೆರೆ ಜಿಲ್ಲೆಯ ಕೈದಾಳೆ ಗ್ರಾಮದಲ್ಲಿ ಲಸಿಕೆ ನೀಡುತ್ತಾರೆ ಎಂಬ ಒಂದೇ ಕಾರಣಕ್ಕೆ ಕೆಲವರು ಕಬ್ಬಿನ ಗದ್ದೆಗಳಲ್ಲಿ ಅವಿತುಕೊಂಡಿದ್ದರು. ಅಂತಹವರನ್ನು ಹೊರಕರೆಸಿದ ದಾವಣಗೆರೆ ತಹಶೀಲ್ದರ್ ಲಸಿಕೆ ಹಾಕಿಸಿದ್ದಾರೆ.
ದಾವಣಗೆರೆ ತಹಶೀಲ್ದಾರ್ ಗಿರೀಶ್ ನೇತೃತ್ವದಲ್ಲಿ ಮನೆ ಮನೆಗೂ ಹೋಗಿ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆರೋಗ್ಯ ಇಲಾಖೆ ಸಿಬ್ಬಂದಿ ಲಸಿಕೆ ನೀಡಲು ಬರುತ್ತಿದ್ದಾರೆಂದು ಜಾಗೃತರಾದ ಕೈದಾಳೆ ಗ್ರಾಮದ ಮೂವರು ವ್ಯಕ್ತಿಗಳು ಕಬ್ಬಿನ ಗದ್ದೆಗೆ ಹೋಗಿ ಅವಿತಿದ್ದರು. ಲಸಿಕೆ ನೀಡುವ ಸಿಬ್ಬಂದಿ ಅದೇ ಕಬ್ಬಿನ ಗದ್ದೆಯಲ್ಲೇ ಇವರಿಗೆ ಲಸಿಕೆ ನೀಡಿದ್ದಾರೆ.
ಕರಿಯಪ್ಪ, ಮಲ್ಲಿಕಾರ್ಜುನ, ಮಸಿಯಪ್ಪ ಕಬ್ಬಿನ ಗದ್ದೆಗೆ ಪರಾರಿಯಾಗಿದ್ದವರು. ಕಳೆದ ವಾರ ಇದೇ ಗ್ರಾಮದಲ್ಲಿ ಲಸಿಕೆ ಹಾಕಲು ಹೋದರೆ ದೇವರು ಮೈಮೇಲೆ ಬಂದಿದೆ ಎಂದು ವೃದ್ಧೆಯೊಬ್ಬರು ಹೈಡ್ರಾಮಾ ಮಾಡಿದ್ದರು. ಅವರಿಗೂ ಮನವೊಲಿಸಿ ಲಸಿಕೆ ನೀಡಲಾಗಿತ್ತು.