ಬೆಂಗಳೂರು : ಮುಂದಿನ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿರುವುದರಿಂದ ಪದವಿ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಸೇರಿದಂತೆ ಶೈಕ್ಷಣಿಕ ಚಟುವಟಿಕೆ ಇನ್ನಷ್ಟು ಚುರುಕುಗೊಳ್ಳಲಿದೆ.
ಜುಲೈ 20ರಂದು ದ್ವಿತೀಯ ಪಿಯುಸಿ ಫಲತಾಂಶ ಪ್ರಕಟಿಸುವ ಸಾಧ್ಯತೆಯಿದೆ. ಇದಕ್ಕೆ ಪೂರಕವಾಗಿ ವಿದ್ಯಾರ್ಥಿಗಳ ಎಸ್ಸೆಸ್ಸೆಲ್ಸಿ ಹಾಗೂ ಪ್ರಥಮ ಪಿಯುಸಿ ಅಂಕಗಳ ಆಧಾರದಲ್ಲಿ ಫಲಿತಾಂಶಗಳನ್ನು ಸಿದ್ಧಪಡಿಸುವ ಕಾರ್ಯವೂ ಅಂತಿಮ ಹಂತಕ್ಕೆ ತಲುಪಿದೆ.
ಈಗಾಗಲೇ ವಿದ್ಯಾರ್ಥಿಗಳಿಗೆ ತಮ್ಮ ಎಸ್ಸೆಸ್ಸೆಲ್ಸಿ ಹಾಗೂ ಪ್ರಥಮ ಪಿಯುಸಿ ಅಂಕ ಪರಿಶೀಲಿಸಿ, ತಿದ್ದುಪಡಿಯಿದ್ದಲ್ಲಿ, ಇಲಾಖೆಗೆ ಮಾಹಿತಿ ನೀಡಲು ಅವಕಾಶ ಕಲ್ಪಿಸಿತ್ತು. ಹಾಗೆಯೇ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಅಂಕಗಳನ್ನು ಸಂಗ್ರಹಿಸಿ, ಅದನ್ನು ದ್ವಿತೀಯ ಪಿಯುಸಿ ಫಲಿತಾಂಶಕ್ಕೆ ಬೇಕಾದ ಮಾದರಿಯಲ್ಲಿ ಕ್ರೋಢೀಕರಿಸಿ, ಅಂತಿಮ ಅಂಕ ನೀಡುವ ಪ್ರಕ್ರಿಯೆಯೂ ವೇಗವಾಗಿ ನಡೆಯುತ್ತಿದೆ. ದ್ವಿತೀಯ ಪಿಯುಸಿ ಫಲಿತಾಂಶಕ್ಕೆ ಸಂಬಂಧಿಸಿದಂತೆ ಅಂತಿಮ ಹಂತದ ಸಿದ್ಧತೆಯನ್ನು ಇಲಾಖೆ ಮಾಡಿಕೊಳ್ಳುತ್ತಿದೆ ಎಂದು ಮೂಲಗಳು ಖಚಿತಪಡಿಸಿವೆ.
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ವಿವಿಧ ಪದವಿ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದೆ. ವಿಶ್ವವಿದ್ಯಾಯ ಹಾಗೂ ಸಂಯೋಜಿತ ಕಾಲೇಜುಗಳಲ್ಲಿ ಈಗಾಗಲೇ ಆನ್‌ಲೈನ್ ತರಗತಿಗಳು ನಡೆಯುತ್ತಿದೆ. ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುತ್ತಿದ್ದಂತೆ 2021-22ನೇ ಸಾಲಿನ ಪ್ರಥಮ ಸೆಮಿಸ್ಟರ್ ಪದವಿಗೆ ದಾಖಲಾತಿ ಪ್ರಕ್ರಿಯೆ ಆರಂಭವಾಗಲಿದೆ.
ಈ ವರ್ಷ ಎಲ್ಲ ವಿದ್ಯಾರ್ಥಿಗಳು ತೇರ್ಗಡೆಯಾಗುತ್ತಿರುವುದರಿಂದ ಪದವಿಯ ವಿವಿಧ ಕೋರ್ಸ್‌ಗಳಿಗೂ ದಾಖಲಾತಿ ಹೆಚ್ಚಾಗುವ ಸಾಧ್ಯತೆಯೂ ಇದೆ. ವಿಜ್ಞಾನ ವಿಭಾಗದ ಅನೇಕ ವಿದ್ಯಾರ್ಥಿಗಳು ಸಿಇಟಿ, ನೀಟ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ವೃತ್ತಿಪರ ಕೋರ್ಸ್‌ಗಳಿಗೆ ದಾಖಲಾತಿ ಪಡೆಯಲಿದ್ದಾರೆ. ಆದರೆ, ಕಲಾ ಮತ್ತು ವಾಣಿಜ್ಯ ವಿಭಾಗದ ಎಲ್ಲ ವಿದ್ಯಾರ್ಥಿಗಳು ಬಹುಪಾಲು ವಿದ್ಯಾರ್ಥಿಗಳು ಪದವಿ ಕೋರ್ಸ್‌ಗೆ ಸೇರಿಕೊಳ್ಳುತ್ತಾರೆ. ಹಾಗೆಯೇ ವಿಜ್ಞಾನ ವಿಭಾಗದ ಕೆಲವು ವಿದ್ಯಾರ್ಥಿಗಳು ಕೂಡ ಪದವಿ ಕೋರ್ಸ್‌ಗೆ ಸೇರಿಕೊಳ್ಳಲಿದ್ದಾರೆ. ಹೀಗಾಗಿ ಸರ್ಕಾರ ಕೂಡ ಪ್ರಸಕ್ತ ಸಾಲಿಗೆ ಅನ್ವಯವಾಗುವಂತೆ ಕಾಲೇಜುಗಳಲ್ಲಿ ಇನ್‌ಟೇಕ್ ಕೂಡ ಹೆಚ್ಚಿಸಬೇಕಾಗುತ್ತದೆ.
ಎಲ್ಲ ವಿದ್ಯಾರ್ಥಿಗಳು ತೇರ್ಗಡೆಯಾಗಲಿರುವುದರಿಂದ ಈಗಾಗಲೇ ಅನೇಕ ಪದವಿ ಕಾಲೇಜುಗಳು ದಾಖಲಾತಿ ಪ್ರಕ್ರಿಯೆಯನ್ನು(ನಿಯಮ ಬಾಹಿರವಾಗಿ) ಆರಂಭಿಸಿವೆ. ವಿದ್ಯಾರ್ಥಿಗಳಿಗೆ ಮುಂಗಡವಾಗಿ ಸೀಟು ಕಾಯಿದಿರಿಸುತ್ತಿವೆ. ಆದರೆ, ಕಾಲೇಜು ಶಿಕ್ಷಣ ಇಲಾಖೆಯ ಅಧಿಕೃತ ಅಧಿಸೂಚನೆ ಹೊರಬೀಳುವವರೆಗೂ ಸರ್ಕಾರಿ ಪದವಿ ಕಾಲೇಜುಗಳಲ್ಲಿ ದಾಖಲಾತಿ ಪ್ರಕ್ರಿಯೆ ಆರಂಭವಾಗುವುದಿಲ್ಲ. ಒಟ್ಟಿನಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಶೈಕ್ಷಣಿಕ ಚಟುವಟಿಕೆ ಇನ್ನಷ್ಟು ಚುರುಕುಗೊಳ್ಳಲಿದೆ.