Breaking News

ದಯಾ ಮರಣ ಕೋರಿ ಅರ್ಜಿ

Spread the love

ಕುಷ್ಟಗಿ: ಗಂಡ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ದಯಾ ಮರಣಕ್ಕೆ ಅವಕಾಶ ನೀಡಬೇಕು ಎಂದು ತಾಲ್ಲೂಕಿನ ಕಂದಕೂರು ಗ್ರಾಮದ ಈರಮ್ಮ ನಿಂಗಪ್ಪ ಕುರ್ನಾಳ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದಾರೆ.

ಅಷ್ಟೇ ಅಲ್ಲದೆ ಸುಮಾರು 61 ವರ್ಷದ ಅವರು ಶುಕ್ರವಾರ ಬೆಳಗಿನಿಂದ ಗ್ರಾಮದ ಹನುಮಂತ ದೇವರ ದೇವಸ್ಥಾನದಲ್ಲಿ ಉಳಿದುಕೊಂಡಿದ್ದಾರೆ. ಮಹಿಳೆ ಸ್ಥಿತಿ ಗಮನಿಸಿದ ನೆರೆಹೊರೆಯವರು ಅನ್ನ ನೀರು ಕೊಟ್ಟಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ದೂರವಾಣಿ ಕರೆ ಮೂಲಕ ವಿವರಿಸಿದ ಈರಮ್ಮ ಕುರ್ನಾಳ, ‘ಪತಿ ಎರಡನೇ ಮದುವೆಯಾಗಿದ್ದಾರೆ. ನನಗೂ ಇಬ್ಬರು ಮಕ್ಕಳಿದ್ದು, ಆಸ್ತಿ ಹಂಚಿಕೆ ಮಾಡಿಕೊಡುವಂತೆ ಕೇಳಿದ್ದಕ್ಕೆ ಕುಪಿತಗೊಂಡ ಗಂಡ ನನ್ನನ್ನು ಮನೆಯಿಂದ ಹೊರಹಾಕಿದ್ದಾರೆ’ ಎಂದರು.

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಮರೇಶ, ‘ನಾನು ಕೇಂದ್ರ ಸ್ಥಳದಲ್ಲಿಲ್ಲ. ಮಹಿಳೆ ದಯಾಮರಣ ಕೋರಿ ಅರ್ಜಿ ಸಲ್ಲಿಸಿದ್ದು ಗಮನಕ್ಕೆ ಬಂದಿಲ್ಲ. ಕಚೇರಿಯಲ್ಲಿರುವ ಸಿಬ್ಬಂದಿ ಅದನ್ನು ಸ್ವೀಕರಿಸಿರಬಹುದು. ಅಷ್ಟಕ್ಕೂ ಈ ವಿಷಯ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಈ ಬಗ್ಗೆ ಪರಿಶೀಲಿಸಿ ಮಾಹಿತಿ ನೀಡುವೆ’ ಎಂದು ಹೇಳಿದರು. ಆದರೆ ರಾತ್ರಿಯಾದರೂ ಅವರು ಮಾಹಿತಿ ನೀಡಲಿಲ್ಲ.

ದೂರು ನೀಡಿಲ್ಲ: ಈ ವಿಷಯದ ಕುರಿತು ಮಾಹಿತಿ ನೀಡಿದ ಸಬ್‌ ಇನ್‌ಸ್ಪೆಕ್ಟರ್‌ ತಿಮ್ಮಣ್ಣ ನಾಯಕ, ಆಸ್ತಿ ವಿಚಾರದಲ್ಲಿ ಮೊದಲ ಪತ್ನಿ ಈರಮ್ಮ ಮತ್ತು ಗಂಡ ನಿಂಗಪ್ಪ ಹಾಗೂ ಅವರ ಮಕ್ಕಳ ಮಧ್ಯೆ ಜಗಳ ನಡೆದಿತ್ತು. ಈ ವಿಷಯ ಗುರುವಾರ ಪೊಲೀಸ್‌ ಠಾಣೆವರೆಗೂ ಬಂದಿತ್ತು. ಯಾರೂ ದೂರು ನೀಡಿಲ್ಲ. ಅಲ್ಲದೆ ದಯಾ ಮರಣಕ್ಕೆ ಅನುಮತಿ ನೀಡುವಂತೆ ಸಿಡಿಪಿಒ ಅವರಿಗೆ ಅರ್ಜಿ ಸಲ್ಲಿಸಿರುವುದು ಗಮನಕ್ಕೆ ಬಂದಿಲ್ಲ’ ಎಂದು ಹೇಳಿದರು.

ಪತಿ ಹೇಳಿದ್ದು: ಈ ಕುರಿತು ವಿವರಿಸಿದ ಪತಿ ನಿಂಗಪ್ಪ ಕುರ್ನಾಳ ಮೊದಲ ಪತ್ನಿ ಮತ್ತು ಮಕ್ಕಳಿಗೆ ಯಾವುದೇ ಅನ್ಯಾಯ ಮಾಡಿಲ್ಲ. ಪಿತ್ರಾರ್ಜಿತವಾಗಿ 3 ಎಕರೆ ಜಮೀನು ಇದ್ದರೂ ನಂತರ ಖರೀದಿಸಿದ್ದು ಸೇರಿ ಒಟ್ಟು 4 ಎಕರೆ ಜಮೀನನ್ನು 2005ರಲ್ಲಿಯೇ ಬಿಟ್ಟುಕೊಟ್ಟಿದ್ದು ನ್ಯಾಯಾಲಯದಲ್ಲಿ ಡಿಕ್ರಿಯಾಗಿದೆ. ಅಷ್ಟೇ ಅಲ್ಲ ತಾವು ಕುಷ್ಟಗಿಯಲ್ಲಿ ವಾಸವಾಗಿದ್ದು ಕಂದಕೂರು ಗ್ರಾಮದ ಮನೆಗೆ ಹೋಗಿಲ್ಲ. ಮನೆ ಬಿಡುವಂತೆಯೂ ಹೇಳಿಲ್ಲ. ಇದೆಲ್ಲ ಕಟ್ಟುಕತೆ. ತಪ್ಪಾಗಿದ್ದರೆ ತಾವು ಯಾವುದೇ ಶಿಕ್ಷೆ ಅನುಭವಿಸುವುದಕ್ಕೂ ಸಿದ್ಧ ಎಂದು ಅವರು
ಸ್ಪಷ್ಟಪಡಿಸಿದರು.


Spread the love

About Laxminews 24x7

Check Also

ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ: ಸಚಿವ ಮುನಿಯಪ್ಪ

Spread the loveಬೆಳಗಾವಿ: ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ. ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಇರುತ್ತಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಪೂರೈಕೆ ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ