ಶಿರಸಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಹಾಗೂ ಮಾಜಿ ಸಿ.ಎಂ ಸಿದ್ದರಾಮಯ್ಯ ಕೂಡಿಕೊಂಡೇ ಹೋಗುತ್ತಿದ್ದಾರೆ. ಅವರ ನಡುವೆ ಬಿರುಕಿದೆ ಎನ್ನುವುದು ಸುಳ್ಳು, ಕೆಲ ಮಾಧ್ಯಮಗಳ ಸೃಷ್ಟಿ. ಪಕ್ಷದ ನಾಯಕರೆಲ್ಲಾ ಒಗ್ಗಟಿಟಿನಿಂದ ಕೆಲಸ ಮಾಡುತ್ತಿದ್ದೇವೆ ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಆರ್.ವಿ.ದೇಶಪಾಂಡೆ ಹೇಳಿದರು.
ನಗರದ ಪೂಗ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಬ್ಲಾಕ್ ಅಧ್ಯಕ್ಷರುಗಳ ಸಭೆಯಲ್ಲಿ ಪಾಲ್ಗೊಂಡು ಹಿರಿಯ ವೈದ್ಯರಾದ ಡಾ. ರಾಜಾರಾಮ ದೊಡ್ಡೂರು, ಡಾ.ಕೆ.ಬಿ.ಪವಾರ್, ಹಿರಿಯ ಪತ್ರಕರ್ತ ಜಯರಾಮ ಹೆಗಡೆ ಅವರನ್ನು ಸಮ್ಮಾನಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.
ಕಾಂಗ್ರೆಸ್‌ನ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರಾಗಬೇಕೆಂಬ ವಿಷಯವಾಗಿ ಪಕ್ಷದ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚುನಾವಣೆಗೆ ಎರಡೂವರೆ ವರ್ಷ ಇರುವಾಗಲೇ ಚರ್ಚೆ ಮಾಡುವ ವಿಷಯವೂ ಅಲ್ಲ, ನಾಲ್ಕು ಗೋಡೆ ಚೌಕಟ್ಟಿನಲ್ಲಿಯೇ ಇರಬೇಕು. ಕೆಲವರು ಅಭಿಮಾನದಿಂದ ಅಭಿಪ್ರಾಯ ಕೊಟ್ಟಿರಬಹುದು. ಅದರದ್ದೆ ಚರ್ಚೆ ಮುಂದುವರೆಸುವ ಅಗತ್ಯವಿಲ್ಲ ಎಂದ ಅವರು, ಪಕ್ಷದ ಹಿತದೃಷ್ಟಿಯಿಂದು ಉಹಾಪೋಹ ಸೃಷ್ಟಿಸುವ ಅಗತ್ಯವಿಲ್ಲ. ಮೊದಲು ಚುನಾವಣೆ ನಡೆಯಬೇಕು, ಕಾಂಗ್ರೆಸ್ ಬಹುಮತ ಬರಬೇಕು, ಆಮೇಲೆ ಮುಖ್ಯಮಂತ್ರಿ ಚರ್ಚೆ ಮಾಡೋಣ ಎಂದರು.
ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಆರ್.ವಿ.ದೇಶಪಾಂಡೆ, ನನ್ನ ರಾಜಕಿಯ ಜೀವನದಲ್ಲಿ ಯಾವಾಗಲೂ ನನ್ನ ಮುಖ್ಯಮಂತ್ರಿ, ಮಂತ್ರಿ ಮಾಡಿ ಎಂದು ಕೇಳಿದವನಲ್ಲ ಎಂದೂ ಹೇಳಿದರು.
ಅಲ್ಲಿ ಏನೋ ಸಮಸ್ಯೆಯಿದೆ:
ಬಿಜೆಪಿಯಲ್ಲಿ ಏನೋ ಸಮಸ್ಯೆಯಿದೆ. ಇದು ಆಡಳಿತದ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಆತಂಕಿಸಿದರು.
ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾನೇ ಮುಖ್ಯಮಮತ್ರಿ ಎಂದು ಹೇಳಿಕೆ ನೀಡುತ್ತಾರೆ. ಅವರೇ ಮುಖ್ಯಮಂತ್ರಿ ಇರುವಾಗ ಹೀಗೆ ಹೇಳುವುದು ಯಾಕೆ, ಇದನ್ನುನೋಡಿದರೆ ಬಿಜೆಪಿಯಲ್ಲಿ ಏನೋ ಸಮಸ್ಯೆಯಿದೆ. ಇದು ಆಡಳಿತದ ಮೇಲೂ ದುಷ್ಪರಿಣಾಮ ಆಗುತ್ತದೆ ಎಂದು ವಿಶ್ಲೇಷಿಸಿದರು.
ಕಾಂಗ್ರೆಸ್‌ನಲ್ಲಿ ಬಿರುಕಿಲ್ಲ. ಡಿಕೆಶಿ, ಸಿದ್ದರಾಮಯ್ಯ ಅವರಿಬ್ಬರೂ ಒಟ್ಟಾಗಿ ಹೋಗುತ್ತಿದ್ದಾರೆ. ಯಾರು ಸಿಎಂ ಎಂಬುದು ಚುನಾವಣೆಯ ಬಳಿಕ ಕಾಂಗ್ರೆಸ್ ಬಹುಮತ ಪಡೆದರೆ ನಾಲ್ಕು ಗೋಡೆಯೊಳಗೆ ತೀರ್ಮಾನ ಆಗಲಿದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ, ಜಿಲ್ಲೆಯಲ್ಲಿ ಮನೆಮನೆಗೆ ಹೋಗಿ ಕೊರೋನಾದಿಂದ ಮೃತಪಟ್ಟವರ ಕುಟುಂಬಕ್ಕೆ ಸರಕಾರದ ಸಹಾಯ ದೊರೆತಿಯೆ ಎಂಬುದನ್ನು ಪರಿಶೀಲಿಸುತ್ತೇವೆ. ಬಾರದಿದ್ದರೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರುತ್ತೇವೆ ಇದಕ್ಕಾಗಿ ಗ್ರಾಮ ಪಂಚಾಯಿತಿ, ಬ್ಲಾಕ್ ಮಟ್ಟದಲ್ಲಿ ಸಮಿತಿ ರಚಿಸಿದ್ದೇವೆ ಎಂದರು.
ಮುಖಂಡರಾದ ಪ್ರಶಾಂತ ದೇಶಪಾಂಡೆ, ನಿವೇದಿತ್ ಆಳ್ವಾ, ದೀಪಕ ದೊಡ್ಡೂರು, ಎಸ್.ಕೆ.ಭಾಗವತ್, ಜಗದೀಶ ಗೌಡ ಮುಂತಾದವರು ಸಭೆಯಲ್ಲಿ ಭಾಗಿಯಾಗಿದ್ದರು