ಚಿಕ್ಕಮಗಳೂರು: ರಮೇಶ್ ಜಾರಕಿಹೋಳಿ ಸಿಡಿ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಹೆಸರು ಯಾಕೆ ತಳುಕು ಹಾಕಲಾಗಿದೆ ಎನ್ನುವುದು ನನಗೆ ತಿಳಿದಿಲ್ಲ. ಪ್ರಕರಣದ ತನಿಖೆಯಾದರೆ ಪ್ರೊಡ್ಯೂಸರ್, ಡೈರೆಕ್ಟರ್ ಯಾರೆಂದು ಗೊತ್ತಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಿಟಿ ರವಿ “ಹಿಂದೆಲ್ಲಾ ಮೌಲ್ಯಾಧಾರಿತ ರಾಜಕೀಯದ ಚರ್ಚೆಯಾಗುತ್ತಿತ್ತು. ಈಗ ಸಿಡಿ ಆಧಾರಿತ ರಾಜಕೀಯದ ಚರ್ಚೆ ಆಗುತ್ತಿದೆ.” ಎಂದರು.
“ಮೌಲ್ಯಾಧಾರಿತ ರಾಜಕೀಯವೋ, ಸಿಡಿ ಆಧಾರಿತ ರಾಜಕೀಯವೋ ಯಾವುದು ಬೇಕೆಂದು ಯೋಚಿಸಬೇಕು, ಸಾರ್ವಜನಿಕ ಜೀವನ ನಡೆಸುವ ನಾವು ಪರಿಶುದ್ದ ರಾಜಕೀಯದ ಬಗ್ಗೆ ಆಲೋಚಿಸಬೇಕು.ರಾಜಕಾರಣಿ ಆದವರಿಗೆ ಜನ ಲಜ್ಜೆ, ಮನ ಲಜ್ಜೆ ಎರಡೂ ಮುಖ್ಯ. ನಮಗೆ ನಾವೇ ಪರಿಮಿತಿ ಹಾಕಿಕೊಳ್ಳಬೇಕು.” ರವಿ ಹೇಳಿದ್ದಾರೆ.
ತಮಿಳುನಾಡಿನಲ್ಲಿ ಅಣ್ಣಾಮಲೈಗೆ ಭಾರೀ ಜನಬೆಂಬಲವಿದೆ
ಮಾಜಿ ಐಪಿಎಸ್ ಅಣ್ಣಾಮಲೈ ಅವರಿಗೆ ತಮಿಳುನಾಡಿನಲ್ಲಿ ಭಾರೀ ಜನಬೆಂಬಲ ವ್ಯಕ್ತವಾಗುತ್ತಿದೆ. ಅವರು ಗೆಲುವು ಸಾಧಿಸುತ್ತಾರೆ. ಹಾಗೆಯೇ ಅಣ್ಣಾಮಲೈ ತಮಿಳುನಾಡಿಗೆ ಒಳ್ಳೆಯ ನಾಯಕತ್ವ ನೀಡುತ್ತಾರೆ ಎಂದ ಮಾಜಿ ಸಚಿವರು ಆ ರಾಜ್ಯದಲ್ಲಿ ಎಐಡಿಎಂಕೆ ನೇತೃತ್ವದ ಎನ್.ಡಿ.ಎ. ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಬಿಜೆಪಿ ಸ್ಪರ್ಧಿಸುವ ಇಪ್ಪತ್ತು ಸ್ಥಾನಗಳ ಪೈಕಿ ಹತ್ತಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.