ಕೊರೊನಾ ಲಾಕ್‌ಡೌನ್ ಕಾಲದಲ್ಲಿ ಸಹಸ್ರಾರು ಜನರಿಗೆ ಸಹಾಯ ಮಾಡಿ ‘ಮಸ್ಸೀಹಾ’ (ದೇವರು) ಎನಿಸಿಕೊಂಡಿದ್ದ ನಟ ಸೋನು ಸೂದ್ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ನಟ ಸೋನು ಸೂದ್ ಗೆ ಸೇರಿದ ಮುಂಬೈನಲ್ಲಿನ ಸ್ಟಾರ್ ಹೋಟೆಲ್‌ಗೆ ಮುಂಬೈ ಮಹಾನಗರ ಪಾಲಿಕೆಯು ನೊಟೀಸ್ ಜಾರಿ ಮಾಡಿದ್ದು. ಸೋನು ಸೂದ್ ಅವರ ಹೋಟೆಲ್ ಕಟ್ಟಡವು ಅಕ್ರಮವಾಗಿ ಕಟ್ಟಲ್ಪಟ್ಟಲಾಗಿದೆ ಎಂದು ಬಿಎಂಸಿ ಆರೋಪಿಸಿದೆ.
ಬಿಎಂಸಿಯ ನೊಟೀಸ್ ಅನ್ನು ಪ್ರಶ್ನಿಸಿ, ಬಿಎಂಸಿ ನೊಟೀಸ್ ಗೆ ತಡೆ ನೀಡಬೇಕು ಎಂದು ಕೋರಿ ನಟ ಸೂನು ಸೂದ್ ಬಾಂಬೆ ಹೈಕೋರ್ಟ್ ಮೆಟ್ಟಲೇರಿದ್ದರು. ಆದರೆ ಬಾಂಬೆ ಹೈಕೋರ್ಟ್ ನಲ್ಲಿ ಸೋನು ಸೂದ್ ಗೆ ಹಿನ್ನಡೆ ಆಗಿದೆ.
ಬಿಎಂಸಿ ಯ ನೊಟೀಸ್ ಗೆ ಉತ್ತರ ನೀಡಲು 10 ವಾರಗಳ ಗಡುವನ್ನು ಸೋನು ಸೂದ್ ಪರ ವಕೀಲರು ಕೇಳಿದ್ದರು. ಆದರೆ ಅದನ್ನು ನಿರಾಕರಿಸಿದ ನ್ಯಾಯಾಲಯವು ‘ಕಾನೂನು ಪರಿಶ್ರಮ ಪಡುವವರಿಗೆ ಸಹಾಯ ಮಾಡುತ್ತದೆ’ ಎಂದು ಹೇಳಿದ್ದಾರೆ.
‘ನೀವು ತಡವಾಗಿದ್ದೀರಿ. ಈಗ ಚೆಂಡು ಬಿಎಂಸಿ ಕಚೇರಿಯಲ್ಲಿದೆ. ಅವರೊಂದಿಗೆ ಮಾತನಾಡಿಕೊಳ್ಳಿ. ನೀವು ಸಾಕಷ್ಟು ತಡವಾಗಿದ್ದೀರಿ. ತಪ್ಪನ್ನು ಸರಿಮಾಡಿಕೊಳ್ಳುವ ಅವಕಾಶ ನಿಮಗೆ ಸಾಕಷ್ಟು ಇತ್ತು ಆದರೆ ಅದನ್ನು ನೀವು ಕೈಚೆಲ್ಲಿದ್ದೀರಿ’ ಎಂದಿದ್ದಾರೆ ನ್ಯಾಯಮೂರ್ತಿ ಪೃಥ್ವಿರಾಜ್ ಚವಾಣ್.
ಸೋನು ಸೂದ್ ಅವರು ವಾಸತಿಗೃಹವನ್ನು ಹೋಟೆಲ್ ಆಗಿ ಬದಲಾಯಿಸಿದ್ದಾರೆ. ಈ ಬದಲಾವಣೆಗಾಗಿ ನಿಯಮಬಾಹಿರವಾಗಿ ಮನೆಯ ಕೆಲವು ಭಾಗಗಳನ್ನು ಒಡೆದಿದ್ದಾರೆ ಎಂದು ಬಿಎಂಸಿ ಆರೋಪಿಸಿದೆ.
ಈ ಹಿಂದೆ ಕಂಗನಾ ರಣೌತ್ ಅವರ ಕಚೇರಿಯನ್ನು ಸಹ ಅಕ್ರಮ ನಿರ್ಮಾಣ ಎಂದು ಆರೋಪಿಸಿ ಕೆಡವಿತ್ತು ಬಿಎಂಸಿ. ಆದರೆ ಬಿಎಂಸಿಯ ವರ್ತನೆಯನ್ನು ಸುಪ್ರೀಂಕೋರ್ಟ್ ಟೀಸಿತ್ತು.