ನವದೆಹಲಿ: ಉತ್ತರ ಪ್ರದೇಶದ ಬಿಜೆಪಿ ಸಂಸದ ಡಾ.ಮಹೇಶ್ ಶರ್ಮಾ ಹಾಗೂ ಪಶ್ಚಿಮ ಬಂಗಾಳದ ಟಿಎಂಸಿ ಶಾಸಕ ರವೀಂದ್ರನಾಥ್ ಚಟರ್ಜಿ ಅವರು ಕೋವಿಡ್ ಲಸಿಕೆ ಪಡೆದ ಮೊದಲ ರಾಜಕಾರಣಿಗಳಾಗಿದ್ದಾರೆ.
ತರಬೇತಿ ಪಡೆದ ವೈದ್ಯರೂ ಆಗಿರುವ ಡಾ.ಶರ್ಮಾ ಅವರು ಶನಿವಾರ ಬೆಳಗ್ಗೆ 11 ಗಂಟೆಗೆ ನೋಯ್ಡಾ ಸೆಕ್ಟರ್ 27ರ ಆಸ್ಪತ್ರೆಯೊಂದರಲ್ಲಿ ಲಸಿಕೆ ಹಾಕಿಸಿಕೊಂಡರು. ಬಳಿಕ ಅರ್ಧ ಗಂಟೆ ಅವರ ಆಸ್ಪತ್ರೆ ವೈದ್ಯರ ನಿಗಾದಲ್ಲಿ ಇದ್ದರು ಎಂದು ವರದಿಯಾಗಿದೆ.
‘ಒಬ್ಬ ವೈದ್ಯನಾಗಿ ಕೊರೊನಾ ವೈರಸ್ ಲಸಿಕೆ ಪಡೆದಿದ್ದೇನೆ. ನಾನು ಸಂಪೂರ್ಣವಾಗಿ ಚೆನ್ನಾಗಿದ್ದೇನೆ. ಲಸಿಕೆ ಸಂಪೂರ್ಣ ಸುರಕ್ಷಿತವಾಗಿದ್ದು, ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು’ಎಂದು ಡಾ.ಶರ್ಮಾ ಟ್ವೀಟ್ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಕತ್ವಾ ದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕರಾಗಿರುವ ರವೀಂದ್ರನಾಥ ಚಟರ್ಜಿ ಅವರು ಲಸಿಕೆಯನ್ನು ಹಾಕಿಸಿಕೊಂಡರು. ಶಾಸಕರನ್ನು 30 ನಿಮಿಷಗಳ ಕಾಲ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಅತಿ ದೊಡ್ಡ ಲಸಿಕೆ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಕೋವಿಡ್ ಅಂತ್ಯದ ಆರಂಭವಾಗಿದೆ ಎಂದು ಹೇಳಿದರು.
 Laxmi News 24×7
Laxmi News 24×7
				 
		 
						
					