ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿಯವರು ಫೇಸ್‍ಬುಕ್ ಪೋಸ್ಟ್ ಹಾಕುವ ಮೂಲಕ ಡ್ರಗ್ಸ್ ಜಾಲಕ್ಕೆ ಸಂಬಂಧಿಸದಂತೆ ಸಿಸಿಬಿ ವಿಚಾರಣೆ ಎದುರಿಸುತ್ತಿರುವ ನಟಿ ಐಂದ್ರಿತಾ ರೈ ಮತ್ತು ನಟ ಸಂತೋಷ್ ಕುಮಾರ್ ಅವರ ಕಾಲೆಳೆದಿದ್ದಾರೆ.
ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾ ವಿಚಾರದಲ್ಲಿ ಕನ್ನಡದ ಸ್ಟಾರ್ ನಟ-ನಟಿಯರು ಸಿಲುಕಿ ಹಾಕಿಕೊಂಡಿದ್ದಾರೆ. ಇಂದು ನಿರೂಪಕ ಅಕುಲ್ ಬಾಲಾಜಿ ಮತ್ತು ನಟ ಸಂತೋಷ್ ಕುಮಾರ್ ಅವರನ್ನು ಸಿಸಿಬಿ ವಿಚಾರಣೆ ಮಾಡಿದೆ. ಈಗಾಗಲೇ ಈ ಪ್ರಕರಣದಲ್ಲಿ ನಟಿ ರಾಗಿಣಿ ಮತ್ತು ಸಂಜನಾ ಜೈಲು ಪಾಲಾಗಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಸಂಬರಗಿಯವರು ಒಂದು ಫೇಸ್‍ಬುಕ್ ಪೋಸ್ಟ್ ಹಾಕಿದ್ದು, ನೂರೂ ಜನ್ಮಕು ಚಿತ್ರದ ನಾಯಕ ಹಾಗೂ ನಾಯಕಿ, ಇಬ್ಬರೂ ಡ್ರಗ್ಸ್ ಜಾಲದಲ್ಲಿ ಆರೋಪ ಎದುರಿಸುತ್ತಿರುವುದು ಏಳೇಳು ಜನುಮದ ವಿಪರ್ಯಾಸ. ಮಾನವ ಜನ್ಮ ದೊಡ್ಡದು, ಇದನ್ನು ಹಾನಿ ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ, ಕಣ್ಣು ಕೈ ಕಾಲ್, ಕಿವಿ, ನಾಲಿಗೆ ಇರಲಿಕ್ಕೆ ಮಣ್ಣು ಮುಕ್ಕಿ ಹುಚ್ಚರಾಗುವಿರಾ ಎಂದು ವ್ಯಂಗ್ಯವಾಡಿದ್ದಾರೆ.
ಇದಕ್ಕೂ ಮುನ್ನ ಮಾತನಾಡಿದ್ದ ಸಂಬರಗಿ, ಸೋಮವಾರ ಮತ್ತಿಬ್ಬರ ಸ್ಟಾರ್ ನಟರ ಹೆಸರು ಬಹಿರಂಗ ಮಾಡುತ್ತೇನೆ. ಸದ್ಯ ಆ ಬಗ್ಗೆ ಯಾವೂದೇ ಕ್ಲೂ ಕೊಡಲ್ಲ. 48 ಗಂಟೆ ಕಾದರೇ ಎಲ್ಲ ಮಾಧ್ಯಮಗಳ ಮುಂದೆ ಬಹಿರಂಗ ಪಡಿಸುತ್ತೇನೆ. ಇದು ಊಹಾಪೋಹಾದ ಕತೆಯಲ್ಲ ದಾಖಲೆ ಸಮೇತ ಹೆಸರು ಹೇಳುತ್ತೇನೆ. ನಾನು ಹೇಳುವ ಹೆಸರು ವಿಧಾನಸೌಧದ ಪಡಸಾಲೆಯಲ್ಲಿ ಸದ್ದು ಮಾಡುತ್ತೆ. ಈ ಹೋರಾಟಕ್ಕೆ ಹಲವರು ನನ್ನ ಬೆನ್ನುತಟ್ಟಿದ್ದಾರೆ. ಈ ಹೋರಾಟದಲ್ಲಿ ನನಗೆ ಯಾವುದೇ ಭಯ ಇಲ್ಲ ಎಂದು ಹೇಳಿದ್ದರು.