ನವದೆಹಲಿ: ಅಂತಿಮ ವರ್ಷದ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಅಂತಿಮ ಸೆಮಿಸ್ಟರ್ ಪರೀಕ್ಷೆ ನಡೆಸದೆ, ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಮತ್ತು ವಿಶ್ವವಿದ್ಯಾಲಯಗಳಿಗೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸೆಪ್ಟೆಂಬರ್ 30ರ ಒಳಗೆ ಅಂತಿಮ ವರ್ಷದ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಅಂತಿಮ ಪರೀಕ್ಷೆಗಳನ್ನು ನಡೆಸಿ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಜುಲೈ 6ರಂದು ಹೊರಡಿಸಿದ್ದ ಮಾರ್ಗಸೂಚಿಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ಆದರೆ, ಪರೀಕ್ಷೆಗಳನ್ನು ಮುಂದೂಡಿ ಎಂದು ಯುಜಿಸಿಗೆ ಮನವಿ ಸಲ್ಲಿಸಲು ರಾಜ್ಯ ಸರ್ಕಾರಗಳಿಗೆ ಅವಕಾಶವಿದೆ ಎಂದೂ ಸುಪ್ರೀಂ ಕೋರ್ಟ್ ಹೇಳಿದೆ.
ಯುಜಿಸಿ ಹೊರಡಿಸಿದ್ದ ಮಾರ್ಗಸೂಚಿಯ ವಿರುದ್ಧ ಸಲ್ಲಿಸಲಾಗಿದ್ದ ಹಲವು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್.ಎಸ್.ರೆಡ್ಡಿ ಮತ್ತು ಎಂ.ಆರ್.ಶಾ ಅವರಿದ್ದ ಪೀಠವು ನಡೆಸಿತು.
‘ಕೋವಿಡ್‌ನ ಕಾರಣದಿಂದ ಪರೀಕ್ಷೆಗಳನ್ನು ನಡೆಸಲು ಸಾಧ್ಯವಿಲ್ಲ ಎಂದು ಹಲವು ರಾಜ್ಯಗಳು ಪರೀಕ್ಷೆಗಳನ್ನು ರದ್ದುಪಡಿಸಿವೆ.
ಆದರೆ 2005ರ ವಿಕೋಪ ನಿರ್ವಹಣೆ ಕಾಯ್ದೆ ಅಡಿ ಇಂತಹ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಮತ್ತು ವಿಶ್ವವಿದ್ಯಾಲಯಗಳಿಗೆ ಇಲ್ಲ. ಅಂತಿಮ ವರ್ಷದ ಪರೀಕ್ಷೆ ನಡೆಸದೇ, ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ನೀಡುವಂತಿಲ್ಲ’ ಎಂದು ಪೀಠವು ಹೇಳಿದೆ.
‘ಅಂತಿಮ ವರ್ಷದ ಪರೀಕ್ಷೆಗಳನ್ನು ನಡೆಸಿ ಎಂದು ಯುಜಿಸಿ ಹೊರಡಿಸಿರುವ ಮಾರ್ಗಸೂಚಿಯು ಕಾನೂನುಬದ್ಧವಾಗಿದೆ. ಇದನ್ನು ರಾಜ್ಯ ಸರ್ಕಾರಗಳು ಮತ್ತು ವಿಶ್ವವಿದ್ಯಾಲಯಗಳು ಪಾಲಿಸಬೇಕು. ಪರೀಕ್ಷೆ ನಡೆಸುವ ಸ್ಥಿತಿಯಲ್ಲಿ ಇಲ್ಲ ಎಂದು ಹೇಳುತ್ತಿರುವ ರಾಜ್ಯಗಳು ಈ ಬಗ್ಗೆ ಯುಜಿಸಿಗೆ ಪತ್ರ ಬರೆಯಬಹುದು. ಪರೀಕ್ಷೆಗಳನ್ನು ಮುಂದೂಡಿ ಎಂದು ಕೇಳಿಕೊಳ್ಳಬಹುದು. ಯುಜಿಸಿ ಸಹ ಪರೀಕ್ಷೆಗಳನ್ನು ಮುಂದೂಡಿ, ಪರಿಷ್ಕೃತ ದಿನಾಂಕವನ್ನು ಆದಷ್ಟು ಬೇಗ ನೀಡಬೇಕು’ ಎಂದು ಪೀಠವು ಸೂಚಿಸಿದೆ.
ಏಕರೂಪ ಪರೀಕ್ಷಾ ಮಂಡಳಿ ಶೀಘ್ರ
ಬೆಂಗಳೂರು: ‘ರಾಜ್ಯದಲ್ಲಿನ ಪದವಿ ಪೂರ್ವ ಶಿಕ್ಷಣ ಮಂಡಳಿ ಹಾಗೂ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯನ್ನು ವಿಲೀನಗೊಳಿಸಿ ಏಕರೂಪ ಪರೀಕ್ಷಾ ಮಂಡಳಿಯನ್ನು ಅಸ್ತಿತ್ವಕ್ಕೆ ತರಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದ ಶೈಕ್ಷಣಿಕ ಚಟುವಟಿಕೆ ನೋಡಿಕೊಂಡರೆ, ಪಿಯು ಶೈಕ್ಷಣಿಕ ಚಟುವಟಿಕೆಯನ್ನು ಪದವಿ ಪೂರ್ವ ಶಿಕ್ಷಣ ಮಂಡಳಿ ನೋಡಿಕೊಳ್ಳುತ್ತಿದೆ. ಶೀಘ್ರವೇ ಇವೆರಡನ್ನೂ ವಿಲೀನಗೊಳಿಸಲಾಗುತ್ತದೆ’ ಎಂದು ಹೇಳಿದರು.
ಶಿಕ್ಷಣ ಇಲಾಖೆಯಲ್ಲಿನ ದೀರ್ಘಕಾಲದ ಬೇಡಿಕೆ ಇದು. ಮುಂದೆ ಅಸ್ತಿತ್ವಕ್ಕೆ ಬರಲಿರುವ ಏಕರೂಪ ಮಂಡಳಿಯು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳೆರಡನ್ನೂ ನಡೆಸಲಿದೆ. ದೇಶದ ಹಲವು ರಾಜ್ಯಗಳಲ್ಲಿ ಒಂದೇ ಪರೀಕ್ಷಾ ಮಂಡಳಿ ಇದೆ. ರಾಜ್ಯದಲ್ಲಿಯೂ ಅದೇ ವ್ಯವಸ್ಥೆ ತರಲು ಉದ್ದೇಶಿಸಲಾಗಿದೆ. ಈ ಉದ್ದೇಶಕ್ಕಾಗಿ ₹50 ಕೋಟಿ ತೆಗೆದಿರಿಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.
ಶಿಕ್ಷಣ ಪರಿಷತ್ ಶೀಘ್ರ: ‘ಪ್ರಾಥಮಿಕ ಮತ್ತು ಪ್ರೌಢಶಿಕ್ಷಣಕ್ಕೆ ಸಂಬಂಧಿಸಿದಂತೆ ನೀತಿ ನಿರೂಪಣೆಗಳು ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಅನುಷ್ಠಾನಗೊಳಿಸಲು ಪ್ರಾಥಮಿಕ ಶಿಕ್ಷಣ ಪರಿಷತ್ ರಚನೆ ಮಾಡಲಾಗುವುದು’ ಎಂದು ಸುರೇಶ್‌ಕುಮಾರ್ ತಿಳಿಸಿದರು.
‘ಶಿಕ್ಷಣ ವ್ಯವಸ್ಥೆಯಲ್ಲಿ ವಿವಿಧ ಆಯಾಮಗಳಿವೆ. ಬೇರೆ ಬೇರೆ ಆಯಾಮದ ಶೈಕ್ಷಣಿಕ ಉದ್ದೇಶಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಈ ಪರಿಷತ್ ಕಾರ್ಯನಿರ್ವಹಿಸಲಿದೆ. ಈ ಪರಿಷತ್ ತಜ್ಞರ ಸಮಿತಿಯನ್ನು ಒಳಗೊಂಡಿರುತ್ತದೆ’ ಎಂದರು.
ಅನುಕೂಲಗಳು
* ಎರಡೂ ಮಂಡಳಿಗಳಲ್ಲಿನ ಉತ್ತಮ ಉಪಕ್ರಮಗಳ ಕ್ರೋಡೀಕರಣ
* ಪರೀಕ್ಷಾ ವೆಚ್ಚ ಮತ್ತು ನಿರ್ವಹಣಾ ವೆಚ್ಚ ಕಡಿಮೆ
* ಎರಡು ಮಂಡಳಿಗಳ ಸಂಪನ್ಮೂಲದ ಸಮಾನ ಬಳಕೆ
* ಬೇರೆ ಇಲಾಖೆಗಳ ಮೇಲೆ ಪಿಯು ಮಂಡಳಿ ಅವಲಂಬನೆ ತಪ್ಪಲಿದೆ
* ಪರೀಕ್ಷಾ ದಿನಾಂಕ, ಫಲಿತಾಂಶ ಪ್ರಕಟಣೆಯಂತಹ ನಿರ್ಧಾರ ಸುಲಭ
* ಹೆಚ್ಚು ಡಿಜಟಲೀಕರಣ- ಪಾರದರ್ಶಕತೆ ಸಾಧ್ಯವಾಗುತ್ತದೆ
* ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ವ್ಯವಸ್ಥೆ ಅಳವಡಿಕೆಗೂ ಅನುಕೂಲ
ಸವಾಲುಗಳು
* ಎರಡೂ ಮಂಡಳಿಗಳು ಪ್ರತ್ಯೇಕ ಮಾನವ ಸಂಪನ್ಮೂಲ ಹೊಂದಿವೆ
* ನಿಯೋಜನೆ ವೇಳೆ ಅಧಿಕಾರಿಗಳ ಸೇವಾ ಹಿರಿತನ ಪ್ರಶ್ನೆ ಉದ್ಭವಿಸುತ್ತದೆ
* ಮಂಡಳಿಗಳಲ್ಲಿನ ಒಂದೇ ವೃಂದ-ಶ್ರೇಣಿಯ ಅಧಿಕಾರಿಗಳ ನಿಯೋಜನೆಯಲ್ಲಿ ಗೊಂದಲ
* ವೇತನ, ಬಡ್ತಿ ವೇಳೆ ಪ್ರತ್ಯೇಕ ಪಟ್ಟಿ ಸಿದ್ಧ ಮಾಡಬೇಕಾದ ಸವಾಲು
ನೀಟ್, ಜೆಇಇ: ‘ಸುಪ್ರೀಂ’ ತೀರ್ಪು ಪುನರ್‌ಪರಿಶೀಲನೆಗೆ ಅರ್ಜಿ
ನವದೆಹಲಿ: ಕೋವಿಡ್-19 ಪಿಡುಗಿನ ಸಂದರ್ಭದಲ್ಲೇ ನೀಟ್ ಹಾಗೂ ಜೆಇಇ ನಡೆಸಲು ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್ ತೀರ್ಪನ್ನು ಪುನರ್‌ಪರಿಶೀಲಿಸುವಂತೆ ಕೋರಿ ಆರು ರಾಜ್ಯಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ.
ಪಶ್ಚಿಮ ಬಂಗಾಳ, ಜಾರ್ಖಂಡ್, ರಾಜಸ್ಥಾನ, ಚತ್ತೀಸ್‌ಗಢ, ಪಂಜಾಬ್ ಹಾಗೂ ಮಹಾರಾಷ್ಟ್ರ ಅರ್ಜಿ ಸಲ್ಲಿಸಿದ ರಾಜ್ಯಗಳಾಗಿವೆ. ‘ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಾತ್ರಿ ಮಾಡುವಲ್ಲಿ ಈ ತೀರ್ಪು ವಿಫಲವಾಗಿದೆ’ ಎಂದು ವಕೀಲರಾದ ಸುನಿಲ್ ಫೆರ್ನಾಂಡಿಸ್ ಅವರ ಮುಖಾಂತರ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
‘ಎನ್‌ಟಿಎ ನೀಡಿರುವ ಮಾಹಿತಿಯಂತೆ 9.53 ಲಕ್ಷ ವಿದ್ಯಾರ್ಥಿಗಳು ಜೆಇಇ ಮೇನ್ಸ್ ಎದುರಿಸಲಿದ್ದು, 660 ಪರೀಕ್ಷಾ ಕೇಂದ್ರಗಳಲ್ಲಿ ತಲಾ 1,443 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅದೇ ರೀತಿ 15.97 ಲಕ್ಷ ವಿದ್ಯಾರ್ಥಿಗಳು ನೀಟ್ ಬರೆಯಲಿದ್ದು, 3,843 ಪರೀಕ್ಷಾ ಕೇಂದ್ರಗಳಿದ್ದರೂ, ಪ್ರತಿ ಕೇಂದ್ರದಲ್ಲಿ 415 ವಿದ್ಯಾರ್ಥಿಗಳು ಇರಲಿದ್ದಾರೆ. ಇಷ್ಟೊಂದು ಸಂಖ್ಯೆಯ ವಿದ್ಯಾರ್ಥಿಗಳು ಪರೀಕ್ಷೆಗಾಗಿ ಹೊರಬಂದಲ್ಲಿ, ಅವರ ಆರೋಗ್ಯದ ಮೇಲೂ ಪರಿಣಾಮ ಬೀರಲಿದೆ. ಜೊತೆಗೆ ಕೋವಿಡ್‌ಗೆ ಪರಿಹಾರವಾಗಿ ಕಂಡುಕೊಂಡಿರುವ ಪರಸ್ಪರ ಅಂತರ ಕಾಯ್ದುಕೊಳ್ಳುವುದು, ಸಾರ್ವಜನಿಕವಾಗಿ ಸೇರುವುದನ್ನು ತಡೆಯುವುದು ಮುಂತಾದ ನಿಯಮಗಳು ಇದ್ದೂ ಇಲ್ಲದಂತಾಗಲಿವೆ’ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಈ ಪರೀಕ್ಷೆಗಳನ್ನು ಮುಂದೂಡುವಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (ಎನ್‌ಟಿಎ) ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಪರೀಕ್ಷೆ ಮುಂದೂಡಲು ಸಾಧ್ಯವಿಲ್ಲ ಎಂದು ಆಗಸ್ಟ್ 17ರಂದು ತೀರ್ಪು ನೀಡಿತ್ತು.
ಪರೀಕ್ಷೆ ನಡೆಸುವುದರ ಪರ ನಿಂತ ಯೋಗಿ: ಉತ್ತರ ಪ್ರದೇಶ ಸರ್ಕಾರ ನೀಟ್ ಹಾಗೂ ಜೆಇಇ ನಡೆಸುವುದರ ಪರವಾಗಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ಹೇಳಿದರು. ಪರೀಕ್ಷೆಗಳನ್ನು ಮುಂದೂಡುವಂತೆ ವಿಪಕ್ಷಗಳಾದ ಸಮಾಜವಾದಿ ಪಕ್ಷ, ಕಾಂಗ್ರೆಸ್ ಬೇಡಿಕೆಯ ಬೆನ್ನಲ್ಲೇ ಉನ್ನತ ಮಟ್ಟದ ಸಭೆಯೊಂದರಲ್ಲಿ ಯೋಗಿ ಆದಿತ್ಯನಾಥ್ ಈ ಹೇಳಿಕೆ ನೀಡಿದ್ದಾರೆ.
ಆ.9ರಂದು ರಾಜ್ಯದಲ್ಲಿ 5 ಲಕ್ಷ ಅಭ್ಯರ್ಥಿಗಳು ಬಿ.ಇಡಿ ಪರೀಕ್ಷೆಯನ್ನು ಎದುರಿಸಿದ್ದರು. ಇದಾದ ನಂತರದಲ್ಲಿ ಕೋವಿಡ್-19ಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಆಗಿಲ್ಲ. ಇದೇ ರೀತಿ ಇತರೆ ಕೆಲ ಪರೀಕ್ಷೆಗಳೂ ರಾಜ್ಯದಲ್ಲಿ ನಡೆದಿದೆ ಎಂದು ಆದಿತ್ಯನಾಥ್ ಹೇಳಿದ್ದಾರೆ.