ಬೆಳಗಾವಿ: ‘ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಬೆಳೆ ಸಮೀಕ್ಷೆ ಮೊಬೈಲ್ ಆಯಪ್ ಮೂಲಕ ದಾಖಲಿಸುವ ವಿನೂತನ ಯೋಜನೆಯನ್ನು ಸರ್ಕಾರದಿಂದ ಪ್ರಾರಂಭಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.
‘ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ, ಹಾಗೂ ಸಾಂಖ್ಯಿಕ ಇಲಾಖೆ ಜಂಟಿ ಸಹಯೋಗದಲ್ಲಿ ಈ ಕಾರ್ಯ ನಡೆಯಲಿದೆ. ಸಂಗ್ರಹವಾದ ಬೆಳೆಗಳ ಮಾಹಿತಿಯನ್ನು ತಾಲ್ಲೂಕು ಆಡಳಿತದಿಂದ ಪರಿಶೀಲಿಸಲಾಗುವುದು’.
‘ರೈತರು ಸ್ಮಾರ್ಟ್ ಮೊಬೈಲ್ ಫೋನ್‌ನಲ್ಲಿ ಬೆಳೆ ಸಮೀಕ್ಷೆ ಆಯಪ್ ಅನ್ನು ಗೂಗಲ್‌ನ ಪ್ಲೇಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ರೈತರ ಪರವಾಗಿ ಕುಟುಂಬದ ಸದಸ್ಯರು, ಸಂಬಂಧಿಕರು ಅಥವಾ ಮೊಬೈಲ್ ಮಾಹಿತಿ ಹೊಂದಿರುವ ಕಂದಾಯ, ಕೃಷಿ ಇಲಾಖೆಯಿಂದ ನಿಯೋಜನೆಯಾದ ಸಮೀಕ್ಷಕರ ಸಹಾಯದಿಂದ ರೈತರು ತಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಪಡೆದು ಮಾಹಿತಿಯನ್ನು ಛಾಯಾಚಿತ್ರ ಸಹಿತ ಅಪ್‌ಲೋಡ್ ಮಾಡಬಹುದಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
ನಿಗದಿತ ಸಮಯದಲ್ಲಿ ಅಪ್‌ಲೋಡ್ ಮಾಡದಿದ್ದಲ್ಲಿ ಪ್ರತಿ ಗ್ರಾಮಕ್ಕೆ ನಿಯೋಜಿತ ಬೆಳೆ ಸಮೀಕ್ಷಕರು ಭೇಟಿ ನೀಡಿ ಅಪ್‌ಲೋಡ್ ಮಾಡುತ್ತಾರೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.