ಉಡುಪಿ: ಪುತ್ತಿಗೆ ಸ್ವಾಮೀಜಿಗೆ ಕೊರೊನಾ ಸೋಂಕು ಹರಡಿದ್ದು, ಮಣಿಪಾಲ ಕೆಎಂಸಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಸ್ವಾಮೀಜಿ ವಿಶ್ರಾಂತಿಯ ಜೊತೆಗೆ ನಿರಂತರ ಪೂಜೆ ಪುನಸ್ಕಾರದಲ್ಲಿ ತೊಡಗಿದ್ದಾರೆ.
ಅನುಷ್ಠಾನಗಳನ್ನು ಮಾಡುತ್ತಿದ್ದಾರೆ. ಆaಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೂ ನಿತ್ಯ ಜಪ ಅನುಷ್ಠಾನಗಳಲ್ಲಿ ಪುತ್ತಿಗೆ ಶ್ರೀಗಳು ತೊಡಗಿಸಿಕೊಂಡಿರುವುದು ಗಮನಸೆಳೆದಿದೆ. ಉಡುಪಿ ಮಾತ್ರವಲ್ಲ ಅಮೆರಿಕ ಸೇರಿದಂತೆ ಹಲವಾರು ದೇಶಗಳಲ್ಲಿ ತಮ್ಮ ಶಾಖಾಮಠಗಳನ್ನು ಹೊಂದಿರುವ ಸ್ವಾಮೀಜಿ ಈ ಬಾರಿ ಉಡುಪಿಯಲ್ಲೇ ಚಾತುರ್ಮಾಸ್ಯ ವೃತ ಕೈಗೊಂಡಿದ್ದರು.ಚಾತುರ್ಮಾಸ್ಯಕ್ಕೆ ಸಂಕಲ್ಪ ಮಾಡಿದ್ದ ಸಮಯದಲ್ಲಿ ಜ್ವರ ಮತ್ತು ಶೀತದ ಲಕ್ಷಣಗಳು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಪರೀಕ್ಷೆಗೆ ಒಳಗಾಗಿದ್ದು, ಪಾಸಿಟಿವ್ ಬಂದಿತ್ತು.
ಬಳಿಕ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಚಿಕಿತ್ಸೆಯ ವೇಳೆ ಸ್ವಾಮೀಜಿ ಪೂಜೆ ಜಪ ಅನುಷ್ಠಾನಗಳಲ್ಲಿ ತೊಡಗಿರುವ ಫೋಟೋ ಭಕ್ತರಿಗೆ ಕೊಂಚ ನೆಮ್ಮದಿ ನೀಡಿದೆ. ಪಿಪಿಇ ಕಿಟ್ ಧರಿಸಿಕೊಂಡೇ ಶ್ರೀಗಳ ಶಿಷ್ಯವೃಂದ ಸ್ವಾಮೀಜಿಯ ಪೂಜೆಗೆ ಸಹಕರಿಸುತ್ತಿದ್ದಾರೆ. ಆರೈಕೆ ಮಾಡುವ ಸಂದರ್ಭ ಕೂಡ ಕಿಟ್ ತೊಟ್ಟಿರುವುದು ಫೋಟೋದಲ್ಲಿ ಕಾಣಿಸುತ್ತಿದೆ.
ಶ್ರೀಗಳ ಆರೋಗ್ಯ ಚೆನ್ನಾಗಿದೆ. ಒಂದು ವಾರಗಳ ಕಾಲ ಅವರು ಆಸ್ಪತ್ರೆಯಲ್ಲಿ ಇರಬೇಕಾಗಬಹುದು. ರೋಗ ಲಕ್ಷಣ ವಾಸಿಯಾಗುತ್ತಿದೆ. ಭಕ್ತರು ಆತಂಕಪಡುವ ಅಗತ್ಯ ಇಲ್ಲ ಎಂದು ಕೆಎಂಸಿ ವೈದ್ಯರು ಹೇಳಿದ್ದಾರೆ. ಚಿಕಿತ್ಸೆ ನಡುವೆ ಅವರಷ್ಟಕ್ಕೆ ಪೂಜೆ ಪುನಸ್ಕಾರದಲ್ಲಿ ತೊಡಗಿಸಿಕೊಳ್ಳುತ್ತಾರೆ. ರೋಗದ ಬಗ್ಗೆಯೇ ಚಿಂತಿಸದೆ ಮಾನಸಿಕವಾಗಿ ನೆಮ್ಮದಿಯಿಂದ ಇರುವುದು ಕೂಡ ಅತೀ ಮುಖ್ಯ ಎಂದು ಚಿಕಿತ್ಸೆ ನೀಡುವ ವೈದ್ಯರು ಹೇಳಿದ್ದಾರೆ.