ಬೆಂಗಳೂರು: ಬಿಜೆಪಿ ರಾಷ್ಟೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರ ವಿರುದ್ಧ ಟ್ವೀಟ್ ಮಾಡಿ ಕಿಡಿಕಾರಿದ್ದ ಮಾಜಿ ಸಿಎಂ ಸಿದ್ದರಾಮಯ್ಯನ ವಿರುದ್ಧ ಸಂಸದ ಪ್ರತಾಪ್ ಸಿಂಹ ಅವರು ಟ್ವೀಟ್ ಮಾಡಿಯೇ ತಿರುಗೇಟು ನೀಡಿದ್ದಾರೆ.
ಬಿಎಲ್ ಸಂತೋಷ್ ಅವರ ವಿರುದ್ಧ ಟ್ವೀಟ್ ಮೂಲಕವೇ ಕಿಡಿಕಾರಿದ್ದ ಸಿದ್ದರಾಮಯ್ಯ, ಚೀನಾ ವಿಚಾರದ ಬಗ್ಗೆ ಮಾತನಾಡಲು ಸಂತೋಷ್ ಯಾರು? ಸಂತೋಷ್ ಅವರು ಸಿಎಂ ಯಡಿಯೂರಪ್ಪಗೆ ಶಹಭಾಸ್ ಗಿರಿ ನೀಡಿದ್ದು ಮನಸ್ಸಿನಿಂದಲೋ ಇಲ್ಲ ನಾಲಿಗಿಯಿಂದಲೋ ಎಂದು ಪ್ರಶ್ನಿಸಿದ್ದರು.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಪ್ರತಾಪ್ ಸಿಂಹ, ಮನಸ್ಸಲ್ಲೊಂದು ನಾಲಿಗೆ ಮೇಲೊಂದು ಇಟ್ಕೋಳೋಕೆ ಸಂತೋಷ್‍ಜಿಯೇನು ನೀವಾ? 2006ಕ್ಕಿಂತ ಮುಂಚೆ ಯಾರನ್ನು ಸಭೆ ಸಮಾರಂಭಗಳಲ್ಲಿ ಅವಳು, ಇವಳು ಅಂತ ಏಕವಚನದಲ್ಲಿ ಹೀಗಳೆಯುತಿದ್ದಿರೋ ಅದೇ ಸೋನಿಯಾ ಗಾಂಧಿಯವರನ್ನು ಅಧಿನಾಯಕಿ ಎಂದು ಒಪ್ಪಿಕೊಂಡಿರೋ ನೀವಷ್ಟೇ ಮನಸ್ಸು ಮತ್ತು ನಾಲಗೆಯಲ್ಲಿ ಬೇರೆ ಬೇರೆ ಇಟ್ಟುಕೊಳ್ಳಲು ಸಾಧ್ಯ ಸಾರ್ ಎಂದು ಕಾಲೆಳೆದಿದ್ದಾರೆ.
ಲಾಕ್‍ಡೌನ್ ವಿಚಾರವಾಗಿ ಸಿದ್ದು ಮಾಡಿದ್ದ ಟ್ವೀಟ್‍ಗೆ ತಿರುಗೇಟು ಕೊಟ್ಟಿರುವ ಸಿಂಹ, ಬಾಸೂ, ನಿಮ್ಮ ಕಾಂಗ್ರೆಸ್ 55 ವರ್ಷ ದೇಶವಾಳಿದರೂ ಕೊರೋನಾ ಬಂದಾಗ ದೇಶದಲ್ಲಿ ಇದ್ದಿದ್ದು ಬೆರಳೆಣಿಕೆಯ ಟೆಸ್ಟಿಂಗ್ ಲ್ಯಾಬ್‍ಗಳು, ವೆಂಟಿಲೇಟರ್ ಗಳು, ಪಿಪಿಇ ಕಿಟ್‍ಳನ್ನಂತೂ ಹುಡುಕಬೇಕಿತ್ತು. ಲಾಕ್‍ಡೌನ್ ಅವಧಿಯಲ್ಲಿ ಇವೆಲ್ಲವನ್ನೂ ಸರಿಪಡಿಸಿ, ಸೋಂಕಿತರ ಸಂಖ್ಯೆ ಎಷ್ಟೇ ಹೆಚ್ಚಾದರೂ ನಿಭಾಯಿಸುವ ಸಾಮರ್ಥ್ಯವನ್ನು ದೇಶ ಹೊಂದುವಂತೆ ಮಾಡಲಾಗಿದೆ ಎಂದು ತಿರುಗೇಟು ನೀಡಿದ್ದಾರೆ.
ಮೂರನೇ ಟ್ವೀಟ್ ಮಾಡಿರುವ ಪ್ರತಾಪ್ ಸಿಂಹ, ಎಂಥದೇ ಆಗಿರಲಿ ನಿಮಗೆ ಧನ್ಯವಾದ ಬಾಸ್. ನಿಮ್ಮ ಸರಣಿ ಟ್ವೀಟ್‍ಗಳನ್ನು ನೋಡಿದರೆ ನಾವು ಮಾತ್ರವಲ್ಲ ನೀವೂ ಬಿಎಲ್ ಸಂತೋಷ್ ಜೀ ಅವರ ಭಾಷಣದ ಫ್ಯಾನು ಅಂತಾ ಗೊತ್ತಾಯ್ತು ಎಂದು ಸಿದ್ದು ವಿರುದ್ಧ ವ್ಯಂಗ್ಯವಾಡಿದ್ದಾರೆ.
https://youtu.be/ZwocKpMtUVY