ಮೈಸೂರು: ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಯ ತಾಲೀಮಿಗೆ ಭಾನುವಾರ ವಿರಾಮ ನೀಡಲಾಯಿತು. ಇದರಿಂದ ಮಾವುತರು ಹಾಗೂ ಕಾವಾಡಿಗಳು ವಿಶ್ರಾಂತಿಯಲ್ಲಿದ್ದರು.
ತಾಲೀಮಿಗೆ ವಿರಾಮ ಹಿನ್ನೆಲೆಯಲ್ಲಿ ಕ್ಯಾಪ್ಟನ್ ಅಭಿಮನ್ಯು, ಭೀಮ, ಏಕಲವ್ಯ, ಪ್ರಶಾಂತ, ಲಕ್ಷ್ಮಿ, ಕಂಜನ್, ಧನಂಜಯ, ಮಹೇಂದ್ರ, ಕಾವೇರಿ, ಹೇಮಾವತಿ, ರೂಪ, ಶ್ರೀಕಂಠ, ಸುಗ್ರೀವ ಗೋಪಿ ಆನೆಗಳಿಗೆ ನೆತ್ತಿಗೆ ಎಣ್ಣೆ ಹಾಕಿ, ಸ್ನಾನ ಮಾಡಿಸಲಾಯಿತು.
ತಾಲೀಮಿನ ಭಾಗವಾಗಿ ಎಲ್ಲಾ ಆನೆಗಳನ್ನು ನಿತ್ಯ ಅರಮನೆಯಿಂದ ಬನ್ನಿಮಂಟಪದವರಗೆ ಕರೆದುಕೊಂಡು ಹೋಗಿ ವಾಪಸ್ ಕರೆದುಕೊಂಡು ಬರಲಾಗುತ್ತಿತ್ತು. ಆದರೆ, ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಆನೆಗಳಿಗೆ ಬೆಳಗ್ಗೆ ಹಾಗೂ ಸಂಜೆಯ ತಾಲೀಮಿಗೆ ವಿರಾಮ ನೀಡಲಾಯಿತು.
ಅರಣ್ಯ ಇಲಾಖೆಯ ಸೂಚನೆಯಂತೆ ಯಾವ ಆನೆಗಳನ್ನು ತಾಲೀಮಿಗೆ ಕರೆದುಕೊಂಡು ಹೋಗಿಲ್ಲ. ನಮ್ಮ ಸಾಂಪ್ರದಾಯದಂತೆ ಆನೆಗಳಿಗೆ ಸ್ನಾನ ಮಾಡಿಸಿ, ನೆತ್ತಿಗೆ ಎಣ್ಣೆ ಹಾಕಿ, ಯಾರ ದೃಷ್ಟಿ ಬೀಳಬಾರದು ಎಂದು ಹಣೆಯ ಮಧ್ಯದಲ್ಲಿ ಕಾಡಿಗೆ ಇಡಲಾಯಿತು. ಅಮಾವಾಸ್ಯೆಯ ದಿನ ಆನೆಗಳು ತಮ್ಮ ಸ್ಥಾನದಿಂದ ಹೊರಗೆ ಹೋದರೆ, ಅವುಗಳ ವರ್ತನೆಯು ಬದಲಾಗುತ್ತದೆ. ಇದರಿಂದ ಅಪಾಯ ಎದುರಾಗಬಾರದು ಎಂದು ಆನೆಗಳನ್ನು ತಾಲೀಮಿಗೆ ಕರೆದುಕೊಂಡು ಹೋಗುವುದಿಲ್ಲ. ಆನೆಗಳಿಗೆ ಸ್ನಾನ ಮಾಡಿಸಿ, ತಲೆಗೆ ಎಣ್ಣೆ ಹಚ್ಚಿ ಅರಮನೆ ಆವರಣದಲ್ಲಿಯೇ ಇರುವ ದೇವಸ್ಥಾನಕ್ಕೆ ತೆರಳಿ ನಮಸ್ಕಾರ ಮಾಡಿಸಿ, ಅವುಗಳನ್ನು ಕರೆದುಕೊಂಡು ಕಟ್ಟಿ ಹಾಕಲಾಯಿತು ಎಂದು ಮಾವುತರು ತಿಳಿಸಿದರು.
ತಾಲೀಮಿಗೆ ವಿರಾಮ ನೀಡಿದ್ದರಿಂದ ಮಾವುತರು ಹಾಗೂ ಕಾವಾಡಿಗಳು ಎಂದಿನಂತೆ ತಮ್ಮ ಆನೆಗಳಿಗೆ ಆಹಾರ ನೀಡಿ, ಕೆಲವರು ತಮ್ಮ ಕಷ್ಟ-ಸುಖ ಹಂಚಿಕೊಳ್ಳುತ್ತಾ ಕುಳಿತಿದ್ದರೆ, ಇನ್ನು ಕೆಲವರು ವಾಲಿಬಾಲ್ ಆಡಿ ಸಂತಸಪಟ್ಟರು.
ನಾಳೆಯಿಂದ (ಸೋಮವಾರ) ಎಂದಿನಂತೆ ತಾಲೀಮು ನಡೆಯಲಿದ್ದು, ಆಯುಧ ಪೂಜೆ ಹಿಂದಿನ ದಿನ ಆನೆಗಳಿಗೆ ಅಂತಿಮ ತಾಲೀಮು ನಡೆಯಲಿದೆ. ನಂತರ ಆಯುಧ ಪೂಜೆ ದಿನ ಆನೆಗಳಿಗೆ ಪೂಜೆ ಸಲ್ಲಿಸಿ, ಸಂಜೆ ವೇಳೆ ದರ್ಗಾಗೆ ಕರೆದುಕೊಂಡು ಹೋಗಿ ಪೂಜೆ ಮಾಡಿಸಿಕೊಂಡು ವಾಪಸ್ ಬರಲಾಗುತ್ತದೆ.
ಜಂಬೂ ಸವಾರಿಯ ದಿನ ಅಂಬಾರಿ ಹೊರುವ ಅಭಿಮನ್ಯುವಿನ ಜೊತೆಯಲ್ಲಿ ಯಾವ್ಯಾವ ಆನೆಗಳು ಸಾಗಬೇಕು ಎಂಬುವುದನ್ನು ಅರಣ್ಯ ಇಲಾಖೆ ಅಂದು ನಿರ್ಧಾರ ಮಾಡಲಿದೆ.
ಈಟಿವಿ ಭಾರತ ಜೊತೆ ದೂರವಾಣಿಯಲ್ಲಿ ಮಾತನಾಡಿದ ಡಿಸಿಎಫ್ (ವನ್ಯಜೀವಿ ವಿಭಾಗ) ಡಾ.ಐ.ಬಿ.ಪ್ರಭುಗೌಡ, ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಬೆಳಗ್ಗೆ ಹಾಗೂ ಸಂಜೆ ವೇಳೆ ಆನೆಗಳ ತಾಲೀಮಿಗೆ ವಿರಾಮ ನೀಡಲಾಗಿದೆ. ನಾಳೆಯಿಂದ ಎಂದಿನಂತೆ ತಾಲೀಮು ನಡೆಯಲಿದೆ ಎಂದರು.